ಕಾರ್ಕಳ, ಫೆ 16 (DaijiworldNews/MS): ಗ್ರಾಹಕರಿಗೆ ಚಿನ್ನಾಭರಣ ವಂಚನೆಗೈದ ಜುವೆಲ್ಲರ್ಸ್ವೊಂದರ ಮಾಲಕನೊಬ್ಬ ಮೂರನೇ ಪ್ರಕರಣದಲ್ಲೂ ಅಪರಾಧಿ ಎಂದು ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಾರ್ಕಳ ನಗರದ ಮಾರ್ಕೇಟ್ ರಸ್ತೆಯಲ್ಲಿ ಶ್ರೀ ದುರ್ಗಾ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಪ್ರಕರಣದ ಅಪರಾಧಿ.
ರೋಸ್ಲಿ ಸೋನ್ಸ್ಯವರ ಬಂಗಾರದ ಒಡವೆಗಳನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ವಿವಿಧ ಹಂತಗಳಲ್ಲಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದನು. ಅವುಗಳನ್ನು ಕರಗಿಸಿ ಪ್ರಭಾರರ್ ಪಾಟೀಲ್ ಯಾನೆ ಧನಂಜಯ್ ಶಿಂಧೆ ಯವರಿಗೆ ಮಾರಾಟ ಮಾಡಿದನು. ಪಡೆದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಗ್ರಾಹಕರಿಗೆ ರೂಪಾಯಿ 1,10,000 ಮೌಲ್ಯದ ಚಿನ್ನಾಭರಣವನ್ನು ವಂಚಿಸಿದನು.
ಆರೋಪಿಯ ವಿರುದ್ದ ಭಾ.ದಂ.ಸಂ. ಕಲಂ. 409, 420ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿದರು. ಪೋಲೀಸ್ ಉಪನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ ಪಿ. ಮತ್ತು ಕಬ್ಬಾಳ್ ರಾಜ್ ಹೆಚ್.ಡಿ ಇವರುಗಳು ಪ್ರಕರಣದ ಅಂಶಿಕ ತನಿಖೆ ನಡೆಸಿದ್ದರು. ಮುಂದಿನ ತನಿಖೆಯನ್ನು ಪೋಲೀಸ್ ಉಪನಿರೀಕ್ಷಕ ಇಮ್ರಾನ್ ಪೂರೈಸಿ ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಇವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯಾದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿದರು. ಕಲಂ.409 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸಾದಾ ಸಜೆ ಮತ್ತು ರೂ.5000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶ ಪ್ರಕಟಿಸಿದ್ದಾರೆ.
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಇವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.