ಚಾರ್ಮಾಡಿ, ಫೆ 16 (DaijiworldNews/MS): ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಹುದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ.
ಅದೇ ರೀತಿ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದುಕೊಂಡೇ ಪಾದಯಾತ್ರೆ ಮೂಲಕ ಸಾಗಿ ಬರುತ್ತಿದ್ದಾರೆ. ಇವರ ದಣಿವು ನಿವಾರಿಸುವ ಜೊತೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ.
ನೂರಾರು ಕಿ.ಮೀ ದೂರದಿಂದ ಪಾದಯಾತ್ರೆ ಮಾಡಿ ಬರುವ ಭಕ್ತರ ದಾಹ ಹಾಗೂ ದಣಿವು ನಿವಾರಿಸಲು ಅರಣ್ಯ ಇಲಾಖೆ ಚಾರ್ಮಾಡಿ ಘಾಟಿಯ ದಾರಿಯುದ್ದಕ್ಕೂ ಸುಮಾರು ಏಳು ಟೆಂಟ್ ಗಳನ್ನು ಹಾಕಿದ್ದು ಭಕ್ತರು ಇಲ್ಲಿ ಕೆಲಕಾಲ ಕುಳಿತು ತಮ್ಮ ಯಾತ್ರೆಯ ಆಯಾಸ ಪರಿಹರಿಸಿಕೊಳ್ಳುತ್ತಿದ್ದಾರೆ. ಈ ಟೆಂಟ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು ದಣಿವು ನಿವಾರಿಸಿ ಕೊಳ್ಳಲು, ವಿಶ್ರಮಿಸಲು ಸೂಕ್ತ ಸ್ಥಳವಿಲ್ಲದೇ ಪರದಾಡುವುದನ್ನು ಮನಗಂಡು ಹಲವು ತಿರುವುಗಳಲ್ಲಿ ಟೆಂಟ್ ಹಾಕಿ ಅರಣ್ಯ ಇಲಾಖೆ ಸಾರ್ಥಕ ಸೇವೆ ಸಲ್ಲಿಸುತ್ತಿದೆ. ಇದರೊಂದಿಗೆ ಸಂಚಾರಿ ವಾಹನದ ಮೂಲಕ ನೀರು ಹಂಚುತ್ತಿದ್ದಾರೆ.
ನಿಸರ್ಗ ಮಾತೆಯ ನೈಜ ಸೊಬಗನ್ನು ಹಾಸುಹೊದ್ದಿರುವ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯನ್ನು ರಕ್ಷಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾದಯಾತ್ರೆ ಮೂಲಕ ಸಾಗಿ ಬರುತ್ತಿರುವ ಭಕ್ತರಲ್ಲಿ ಸ್ವಚ್ಚತೆ ಹಾಗೂ ಕಾಡಿನ ಅಂಚಿನಲ್ಲಿ ತ್ಯಾಜ್ಯ ಕಸಗಳನ್ನು ಎಸೆಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ., ಚಾರ್ಮಾಡಿ ಘಾಟಿ ಒಂದನೇ ತಿರುವಿನಿಂದ 11 ನೇ ತಿರುವಿನವರೆಗೆ ಅಲ್ಲಲ್ಲಿ ಭಕ್ತಾದಿಗಳಿಗೆ ಕಸ ಎಸೆಯಲು ಸುಲಭವಾಗುವಂತಹ ಕಸದ ತೊಟ್ಟಿಗಳನ್ನು ನಿರ್ಮಾಣಮಾಡಿದ್ದಾರೆ. ಇದಲ್ಲದೆ ಅರಣ್ಯ, ಪರಿಸರ, ವನ್ಯಜೀವಿಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ .