ಉಳ್ಳಾಲ, ಫೆ 15 (DaijiworldNews/DB): ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಅವರಿಂದಾಗಿ ಇಂದು ಸಮಾಜದ ಪ್ರತಿಯೊಬ್ಬರಿಗೂ ಮೀಸಲಾತಿ ಸಿಗುತ್ತಿದ್ದರೂ ದಲಿತರಿಗೆ ಮಾತ್ರ ಮೀಸಲಾತಿ ಸೀಮಿತವಾಗಿದೆ ಎಂದು ಬಿಂಬಿಸಲಾಗತ್ತಿರುವುದು ವಿಪರ್ಯಾಸ. ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಬೇಕಾದಂತಹ ವಿಶ್ವವಿದ್ಯಾನಿಲಯಗಳೇ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರನ್ನು ನಿಂದಿಸುತ್ತಿದೆ. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ನಿಂದನೆ ಹಾಗೂ ಜಾತಿ ನಿಂದನೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಜೈನ್ ವಿ.ವಿ.ಯ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಾತಿ ನಿಂದನೆ ಹಾಗೂ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆಂದು ಆರೋಪಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗಗಳ ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಬುಧವಾರ ವಿಜ್ಞಾನ ವಿಭಾಗದ ಅಂಬೇಡ್ಕರ್ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಫೆಬ್ರವರಿ 6ರಂದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಿಎಂಎಸ್ (ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್) ವಿಭಾಗವು ಯುವಜನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಿರು ನಾಟಕವೊಂದರಲ್ಲಿ ಕೆಲ ವಿದ್ಯಾರ್ಥಿಗಳು ಭಾರತೀಯ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ| ಬಿ. ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವುದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಜಾತಿನಿಂದನೆ ಮಾಡಿರುವ ಘಟನೆ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾದ್ಯಮಗಳ ಮೂಲಕ ಬೆಳಕಿಗೆ ಬಂದಿದೆ. ಸುದ್ದಿ ಮಾದ್ಯಮಗಳಿಂದ ಬಿತ್ತರಗೊಂಡಿರುವ ವಿಡಿಯೋ ತುಣುಕನ್ನು ಅವಲೋಕಿಸಿದಾಗ ರಾಷ್ಟ್ರ ನಾಯಕರು ಆಗಿರುವ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಅವರನ್ನು 'ಬಿಯರ್ ಅಂಬೇಡ್ಕರ್' ಎಂದು ಹಿನ್ನೆಲೆ ಧ್ವನಿ ಬಳಸಿಕೊಂಡು ಅಪಹಾಸ್ಯ ಹಾಗೂ ಅವಹೇಳನ ಮಾಡಲಾಗಿದೆ. ಇದೇ ಸಂದರ್ಭಕ್ಕೆ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವವರು ಹಾಸ್ಯಾಸ್ಪದವೆಂಬಂತೆ ನಗುತ್ತಿರುವ ಚಿತ್ರಣವು ದಾಖಲಾಗಿದೆ. ಅದೇ ರೀತಿ 'ದಲಿತ' ಎಂಬ ಪದವನ್ನು 'ದ-ಲಿಟ್' ಎಂದು ಬಳಸುವುದರ ಜೊತೆಗೆ ದಲಿತರನ್ನು ಅಸ್ಪೃರು ಎಂಬಂತೆ ವ್ಯಂಗ್ಯ ಮಾಡಲಾಗಿದೆ ಎಂದು ಅವರು ಆಪಾದಿಸಿದರು.
ಸಂಘದ ಉಪಾಧ್ಯಕ್ಷ ಅವಿನಾಶ್ ಕಾಮ್ಲೆ, ವಿಜಯ್ ಕುಮಾರ್, ಗೋವಿಂದ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ವಿ.ವಿಯ ಮುಖ್ಯದ್ವಾರದಿಂದ ಉಪಕುಲಪತಿಗಳ ಆಡಳಿತ ಕಚೇರಿವರೆಗೂ ವಿದ್ಯಾರ್ಥಿಗಳಿಂದ ಪ್ರತಿಭಟನಾ ಜಾಥಾ ನಡೆದು ಕುಲಸಚಿವ ಕಿಶೋರ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಯಥಾಪ್ರತಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿ ಒತ್ತಾಯಿಸಲಾಗಿದೆ.