ಉಡುಪಿ, ಫೆ 15 (DaijiworldNews/DB): ಅನ್ಯ ರಾಜ್ಯದ ಮೀನುಗಾರರು ಕರಾವಳಿ ಕರ್ನಾಟಕದ ಮೀನುಗಾರರ ಮೇಲೆ ನಡೆಸಿದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಫೆಬ್ರವರಿ 8ರಂದು ಕನ್ಯಾಕುಮಾರಿಯಿಂದ ನೇರ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ಕರ್ನಾಟಕದ ಆಳ ಸಮುದ್ರ ದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮೀನುಗಾರರ ಮೇಲೆ ಅನ್ಯ ರಾಜ್ಯದ ಮೀನುಗಾರರು ಹಲ್ಲೆ ನಡೆಸಿರುವ ಘಟನೆ ಖಂಡನೀಯ. ನಮ್ಮ ರಾಜ್ಯದ ಬೋಟುಗಳನ್ನು ಬೇರೆ ರಾಜ್ಯದ ಬೋಟುಗಳಲ್ಲಿದ್ದವರು ಸುತ್ತುವರಿದಿದ್ದಲ್ಲದೆ, ನಮ್ಮ ಮೀನುಗಾರರ ಮೇಲೆ ಸೀಸ, ಕಲ್ಲು, ಮರದ ತುಂಡುಗಳನ್ನು ಎಸೆದು ಗಾಯಗಳನ್ನುಂಟು ಮಾಡಿದ್ದಾರೆ. ಬೋಟ್ಗಳಿಗೂ ಹಾನಿ ಮಾಡಿದ್ದಾರೆ. ಅಲ್ಲದೆ ಬೋಟ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ಕದ್ದೊಯ್ದಿದ್ದಾರೆ. ಇದೊಂದು ಅಮಾನವೀಯ ಕೃತ್ಯವಾಗಿದೆ ಎಂದು ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕರಾವಳಿ ಮೀನುಗಾರರ ಮೇಲೆ ಆಗಿರುವ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆ ನಡೆಸಿರುವ ಅನ್ಯ ರಾಜ್ಯದ ಮೀನುಗಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಅಲ್ಲದೆ ಮೀನುಗಾರರಿಗೆ ಆಗಿರುವ ಆರ್ಥಿಕ ನಷ್ಟ ಭರಿಸಲು ಸರ್ಕಾರ ಕ್ರಮ ವಹಿಸಬೇಕು. ಮುಂದೆ ನಮ್ಮ ಮೀನುಗಾರರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಇದೇ ವೇಳೆ ಅವರು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.