ಧರ್ಮಸ್ಥಳ, ಫೆ 15 (DaijiworldNews/DB): ಮಾದಕ ಪದಾರ್ಥಗಳು ವ್ಯಕ್ತಿಯ ಬಾಹ್ಯ ಮತ್ತು ಆಂತರಿಕ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನರು ಸಹಕರಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಅವರು ಫೆಬ್ರವರಿ 15ರ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಿದ್ದ ನವಜೀವನ ಸಮಾವೇಶ 2022-23ರಲ್ಲಿ ಭಾಗವಹಿಸಿ ಮಾತನಾಡಿದರು.
ಮಾದಕತೆ ವ್ಯಕ್ತಿಯ ಬಾಹ್ಯ ಮತ್ತು ಆಂತರಿಕ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ಕುಡಿದ ನಂತರ, ಒಬ್ಬ ವ್ಯಕ್ತಿಯು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವನು ಕೆಲವೊಮ್ಮೆ ತನಗೆ ಮತ್ತು ಇತರ ಜನರಿಗೆ ಹಾನಿ ಮಾಡುತ್ತಾನೆ. ಕುಡಿತದಿಂದ ಕುಟುಂಬ ಬಾಧಿತವಾಗುತ್ತದೆ. ಯುವಕರು ಮತ್ತು ವಯಸ್ಕರನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಮಸ್ಯೆಯ ಮೌಲ್ಯಮಾಪನ, ತಡೆಗಟ್ಟುವ ಕ್ರಮ, ಚಿಕಿತ್ಸೆ ಮತ್ತು ವ್ಯಸನಿಗಳ ಪುನರ್ವಸತಿ, ಮಾಹಿತಿಯ ಪ್ರಸರಣ ಮತ್ತು ಸಾರ್ವಜನಿಕ ಜಾಗೃತಿ ಸೇರಿದಂತೆ ಮಾದಕ ವ್ಯಸನ ತಡೆಗಟ್ಟುವಿಕೆಯ ಎಲ್ಲಾ ಅಂಶಗಳನ್ನು ಸಂಘಟಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.
ನಾನು ಯುವಕನಾಗಿದ್ದ ಸಂದರ್ಭದಲ್ಲಿ ಮದ್ಯಪಾನ ವ್ಯಸನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೆ. ನಂತರ ಕೇಂದ್ರ ಸಚಿವರಾಗಿದ್ದಾಗ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸಿದ್ದೇವೆ. ಇದರಿಂದಾಗಿ ಅನೇಕರು ವ್ಯಸನ ಮುಕ್ತರಾಗಿ ಹೊರ ಬಂದರು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನರು ಸಹ ಸಹಕರಿಸಿದಾಗ ಮಾತ್ರ ಸರ್ಕಾರ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯ. ಈ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರೀ ಧರ್ಮಸ್ಥಳ ಸಂಸ್ಥಾನವು ಜನ ಜಾಗೃತಿ ವೇದಿಕೆ ಮೂಲಕ ಕೆಲಸ ಮಾಡುತ್ತಿದೆ. ಕುಟುಂಬದ ಸದಸ್ಯರು ವ್ಯಸನಕ್ಕೆ ಬಲಿಯಾದವರಿಗಾಗಿ ಶಿಬಿರಗಳ ಮೂಲಕ ವ್ಯಸನಮುಕ್ತಗೊಳಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ಕಳೆದ ಮೂರು ದಶಕಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1,644 ಕ್ಕೂ ಹೆಚ್ಚು ಮಾದಕ ವ್ಯಸನಿಗಳ ಶಿಬಿರಗಳ ಮೂಲಕ 1,15,000ಕ್ಕೂ ಹೆಚ್ಚು ಮಾದಕ ವ್ಯಸನಿಗಳನ್ನು, ಅವರ ಮನಸ್ಸನ್ನು ಬದಲಾಯಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದೆ. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಿಗೆ ಮಾದಕ ದ್ರವ್ಯ ಮತ್ತು ಮದ್ಯಪಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸರಳತೆ ಮತ್ತು ಆದರ್ಶ ಜೀವನ ನಮಗೆ ಸದಾ ಸ್ಪೂರ್ತಿ. ಸೂರ್ಯನಿಗೆ ದೀಪ ತೋರಿಸುವಂತ ಶಕ್ತಿ ಅವರಲ್ಲಿದೆ ಎಂದು ಅವರು ಶ್ಲಾಘಿಸಿದರು.
ಹೇಮಾವತಿ ವೀರೇಂದ್ರ ಹೆಗ್ಗಡೆ, ಉಜಿರೆ ಎಸ್ಡಿಎಂಸಿ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಎಂ. ಕೊರವಿ ಮತ್ತು ಕಾರ್ಯದರ್ಶಿ ವಿವೇಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.