ಕಾರ್ಕಳ, ಫೆ 15 (DaijiworldNews/MS): ಗ್ರಾಹಕರನ್ನು ವಂಚಿಸಿದ ಚಿನ್ನಾಭರಣ ಅಂಗಡಿಯೊಂದರ ಮಾಲಕನಿಗೆ ಮತ್ತೊಂದು ಪ್ರಕರಣಕ್ಕೆ ಸಂಬಧಿಸಿದಂತೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.
ಕಾರ್ಕಳ ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗಾ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಶಿಕ್ಷೆಗೊಳಗಾದವನು.
2009 ಅಕ್ಟೋಬರ್ 30ರಂದು ಸುರೇಶ್ ಕೆ ಸಾಲ್ಯಾನ್ ಇವರಿಂದ 8.580 ಗ್ರಾಂ ತೂಕದ ರೂ 17,160 ಮೌಲ್ಯದ ಹಳೆಯ ರೇಡಿಯೋ ಚೈನನ್ನು ಪಡೆದುಕೊಂಡು ಇದರಿಂದ ಹೊಸ ರೋಪ್ ಚೈನನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.
2010 ಆಗಸ್ಟ್ ೨೦ರಂದು ಪ್ರೇಮಾ ಎಂಬವರಿಂದ 8.500 ಗ್ರಾಂ ತೂಕದ ರೂ. 17,000 ಮೌಲ್ಯದ ಹಳೆ ಡಿಸೈನಿನ ಚಿನ್ನದ ಚೈನನ್ನು ಪಡೆದುಕೊಂಡು ಇದರಿಂದ ೨೪ ಇಂಚು ಉದ್ದದ ಕಟ್ಟಿಂಗ್ ಹವಳದ ಹೊಸ ಸರವನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.
2010 ಆಗಸ್ಟ್ 20ರಂದು ವಸಂತಿ ಎಂಬವರಿಂದ 8 ಗ್ರಾಂ ತೂಕದ ರೂ. 16,000 ಮೌಲ್ಯದ ಹಳೆಯ ಚಿನ್ನದ ಚಕ್ರಸರವನ್ನು ಪಡೆದುಕೊಂಡು ಅದರಿಂದ ಹೊಸ ರೇಡಿಯೋ ಚೈನ್ ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು. ಈ ಎಲ್ಲಾ ಪ್ರಕರಣದಲ್ಲಿ ಒಟ್ಟು ರೂ. 50,160 ಮೌಲ್ಯದ ಚಿನ್ನಾಭರಣವನ್ನು ವಂಚಿಸಿ ನಂಬಿಕೆ ದ್ರೋಹವೆಸಗಿದ್ದನು.
ಈ ಬಗ್ಗೆ ಆರೋಪಿಯ ವಿರುದ್ದ ಭಾ.ದಂ.ಸಂ. ಕಲಂ.409,420ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿದರು. ಪೋಲೀಸ್ ಉಪನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ ಪಿ. ಮತ್ತು ಕಬ್ಬಾಳ್ ರಾಜ್ ಹೆಚ್.ಡಿ ಇವರುಗಳು ಪ್ರಕರಣದ ಅಂಶಿಕ ತನಿಖೆ ನಡೆಸಿದ್ದರು. ಮುಂದಿನ ತನಿಖೆಯನ್ನು ಪೋಲೀಸ್ ಉಪನಿರೀಕ್ಷಕ ಇಮ್ರಾನ್ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆರೋಪಿಯಾಗಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿದರು. ಕಲಂ.409 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸಾದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದ್ದಾರೆ.
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.