ಮಣಿಪಾಲ, ಫೆ 14 (DaijiworldNews/MS): ಮಣಿಪಾಲದ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ಗೋವು ಆಲಿಂಗನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇತ್ತೀಚಿಗಷ್ಟೇ ಕೇಂದ್ರ ಸರಕಾರದ ಪ್ರಾಣಿ ಕಲ್ಯಾಣ ಮಂಡಳಿ ಫೆಬ್ರವರಿ 14 ರಂದು ಗೋವು ಆಲಿಂಗನ ದಿನವನ್ನು ಆಚರಿಸಲು ಆದೇಶ ನೀಡಿ ತದನಂತರ ಆದೇಶವನ್ನು ಹಿಂಪಡೆದಿತ್ತು.
ಮಣಿಪಾಲದ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 14 ಅನ್ನು ಗೋವು ಆಲಿಂಗನ ದಿನವನ್ನಾಗಿ ಆಚರಿಸಿ ಗೋ ಪೂಜೆ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ದೇವಸ್ಥಾನದ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ "ವ್ಯಾಲೆಂಟೈನ್ಸ್ ಡೇ ಎಂಬುವುದು ಪಾಶ್ಚಾತ್ಯ ದೇಶದ ವಿಕೃತಿ. ಇದನ್ನು ಜಗತ್ತಿನಲ್ಲಿ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತಿದೆ. ಇದರ ಹಿನ್ನಲೆ ಅನೇಕರಿಗೆ ತಿಳಿದಿಲ್ಲ, ಯಾವುದೋ ಒಬ್ಬ ರಾಜನ ಅಜ್ಞೆಯನ್ನು ಉಲ್ಲಂಘನೆ ಮಾಡಿರುವ ಘಟನೆಯನ್ನು ವ್ಯಾಲೆಂಟೈನ್ ಡೇ ಆಗಿ ಆಚರಿಸಲಾಗುತ್ತಿದೆ. ಆದರೂ ಭಾರತದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಆಚರಿಸುತ್ತಿದ್ದಾರೆ. ಮೋದಿ ಸರಕಾರ ಫೆಬ್ರವರಿ 14 ಅನ್ನು ಗೋವು ಅಲಿಂಗನ ದಿನವನ್ನಾಗಿ ಆಚರಿಸಲು ಚಿಂತನೆ ನಡೆಸಿತ್ತು. ಮುಂದಿನ ವರ್ಷಗಳಲ್ಲಿ ಇದು ಅಧಿಕೃತವಾಗಿ ಪ್ರಾರಂಭವಾಗಲಿ" ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಘುಪತಿ ಭಟ್ ರವರ ಮಾತೃಶ್ರೀಯವರಾದ ಸರಸ್ವತಿ ಭಾರಿತ್ತಾಯ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾದ ಮಹೇಶ್ ಠಾಕೂರ್, ಮತ್ತಿತರರು ಉಪಸ್ಥಿತರಿದ್ದರು.
ಫೆಬ್ರವರಿ 22 ರಿಂದ ಮಾರ್ಚ್ 5 ರ ವರೆಗೆ ಶಿವಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ 12 ದಿನಗಳ ಕಾಲ ಬೃಹತ್ ಅತಿರುದ್ರ ಮಹಾಯಾಗವು ನಡೆಯಲಿದೆ.