ಮೂಡುಬಿದಿರೆ, ಫೆ 14 (DaijiworldNews/MS): ಎರಡು ದಿನಗಳ ಹಿಂದೆ ಬಾವಿಗೆ ಭಾನುವಾರ ಬಿದ್ದಿದ್ದ ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಮರಿಯನ್ನು ಪಶುವೈದ್ಯೆ ಬೋನಿನೊಳಗಿದ್ದು ಬಾವಿಗಿಳಿದು ರಕ್ಷಿಸಿ ಮೇಲಕ್ಕೆಎತ್ತಿದ್ದಾರೆ.
ಬಾವಿ ಮೂವತ್ತಡಿಗಿಂತಲೂ ಆಳವಾಗಿದ್ದು ಬಾವಿಯ ಒಳಗೆ ಒಂದು ಬದಿಯಲ್ಲಿದ್ದ ದೊಡ್ಡ ಬಿಲದಲ್ಲಿ ಅಡಗಿಕೊಳ್ಳುತ್ತಿದ್ದ ಈ ಚಿರತೆ ಮರಿ ಅರಣ್ಯ ಇಲಾಖೆಯವರು ಇಳಿಸಿದ ಬೋನಿನೊಳಗೂ ಬರಲೊಪ್ಪುತ್ತಿರಲಿಲ್ಲ . ಆಗ ಇಲಾಖೆಯ ಕರೆ ಮೇರೆಗೆ ಎನ್ಜಿಓ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್ಕ್ಯೂ ಸೆಂಟರ್ನ ತಜ್ಞ ಪಶುವೈದ್ಯರಾದ ಡಾ. ಯಶಸ್ವಿ, ಡಾ. ಮೇಘನಾ , ಡಾ. ಪೃಥ್ವೀ, ಡಾ. ನಫೀಸಾ ಸ್ಥಳಕ್ಕಾಗಮಿಸಿದರು. ಡಾ. ಮೇಘನಾ ಅವರು ಅರಿವಳಿಕೆ ಲೋಡ್ ಮಾಡಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬಂದಿಗಳು, ಊರವರು ಸೇರಿಕೊಂಡು ಅವರನ್ನು ಬಾವಿಗಳಿಸಿದರು. ಅಲ್ಲಿ ನಡೆಯಿತು ಅರಿವಳಿಕೆ ಮದ್ದಿನ ಪ್ರಯೋಗ. ಮತ್ತೆ ಅರಣ್ಯ ಇಲಾಖೆಯ ಸಿಬಂದಿ ಮೂಲಕ ಬೋನಿನೊಳಗೆ ಹಾಕಲಾಯಿತು. ಬಾವಿಯಿಂದ ಮೇಲೆ ಬಂದ ಬಳಿಕ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಅದು ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಂಧಮುಕ್ತಗೊಳಿಸಿ ಬಿಟ್ಟರು.
ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್., ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಹಾಗೂ ಸಿಬಂದಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲ ಕ್ರಮ ಕೈಗೊಂಡಿದ್ದರು.