Karavali
ಕುಂದಾಪುರ: ದತ್ತು ಪಡೆದಿದ್ದ ಪೋಷಕರನ್ನು ಅರಸಿ ಹೊರಟ ಬಾಲಕಿ ಹೇಳಿದ ಬೆಚ್ಚಿ ಬೀಳಿಸುವ ಕಥೆ - 'ರಕ್ಷಕರೇ ರಾಕ್ಷಸರು' !
- Fri, Mar 15 2019 09:21:34 AM
-
ಕುಂದಾಪುರ,ಮಾ 15 (MSP): ಅಪ್ರಾಪ್ತ ಅನಾಥ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ ಎನ್ನುವ ಗಂಭೀರ ಆರೋಪದ ಮೇಲೆ ಕುಂದಾಪುರದ ಕೆದೂರಿನಲ್ಲಿರುವ ಸ್ಪೂರ್ತಿಧಾಮದ ಸ್ವಯಂಘೋಷಿತ ಕಾರ್ಯದರ್ಶಿ ಕೇಶವ ಕೋಟೇಶ್ವರನನ್ನು ಹಾಗೂ ಅತ್ಯಾಚಾರ ನಡೆಸಿದ್ದಾನೆನ್ನಲಾದ ಇನ್ನೋರ್ವ ಆರೋಪಿ ನೂಜಿ ನಿವಾಸಿ ಹನುಮಂತ ಎಂಬಾತನನ್ನು ಉಡುಪಿ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಮಾ.14ರ ಗುರುವಾರ ನಡೆದಿದೆ.
ಬುಧವಾರ ರಾತ್ರಿ ಆರೋಪಿ ಸ್ಪೂರ್ತಿಧಾಮದ ಕಾರ್ಯದರ್ಶಿ ಕೇಶವ ಕೋಟೇಶ್ವರನನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಆತನ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಹನುಮಂತಪ್ಪನನ್ನು ಮಂಗಳವಾರ ರಾತ್ರಿ ಬಂಧಿಸಿದ್ದು, ಆತನ ವಿಚಾರಣೆಯ ಬಳಿಕ ಕೇಶ್ವ ಕೋಟೇಶ್ವರನನ್ನು ಬಂಧಿಸಲಾಗಿದೆ.
ಸುಳಿವು ಕೊಟ್ಟ ಬಾಲಕಿ: ಸುತಾರಾಂ ಸ್ಪೂರ್ತಿಧಾಮಕ್ಕೆ ಹೋಗುವುದಿಲ್ಲ ಎಂದು ಸ್ಪೂರ್ತಿಧಾಮದಿಂದ ಯಾರಿಗೂ ಹೇಳದೇ ತನ್ನನ್ನು ದತ್ತು ಪಡೆದಿದ್ದ ಪೋಷಕರನ್ನು ಅರಸಿ ಹೊರಟ 10 ವರ್ಷದ ಅಪ್ರಾಪ್ತೆ ಬಾಲಕಿ ಕೋಟ ಪೊಲೀಸ್ ಠಾಣೆಗೆ ದೊರಕಿದ್ದೇ ಪವಾಡ. ಅಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಆಕೆಯನ್ನು ವಿಚಾರಿಸಿದಾಗ ಕೇಶವನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೇ ರಾತ್ರಿ ವೇಳೆ ಹೊರಗಿನಿಂದ ಕಾಮತೀಟೆ ತೀರಿಸಿಕೊಳ್ಳಲು ಯುವಕರು ಬಂದು ಲೈಂಗಿಕ ದೌರ್ಜನ್ಯ ಮಾಡುತ್ತಿರುವುದಾಗಿ ಅಲ್ಲಿ ತನಗೆ ಭಯವಾಗುತ್ತಿರುವುದಾಗಿ ಆಕೆ ಬಾಯ್ಬಿಟ್ಟಿದ್ದು ಇಬ್ಬರ ಬಂಧನಕ್ಕೆ ಕಾರಣವಾಗಿದೆ.
ಹಗ್ಗದಿಂದ ರೂಮಿಗೆ ಬರುತ್ತಿದ್ದ: ಪೊಲೀಸರ ಅತಿಥಿಯಾಗಿರುವ ಹನುಮಂತ ರಾತ್ರಿ ಸ್ಪೂರ್ತಿಧಾಮದ ಒಳಗೆ ಬಂದು ಮೇಲಿನ ಮಹಡಿಯ ಕಿಟಕಿಗೆ ಹಗ್ಗ ಕಟ್ಟಿ ಅದರ ಸಹಾಯದಿಂದ ಮೇಲೆ ಬಂದು ತಾನು ತಂದಿದ್ದ ಬಿರಿಯಾನಿಯನ್ನು ಮಕ್ಕಳಿಗೆ ನೀಡಿ ಅವರನ್ನು ಪುಸಲಾಯಿಸಿ ಅತ್ಯಾಚಾರ ನಡೆಸುತ್ತಿದ್ದ ಎನ್ನುವ ಆಘಾತಕಾರಿ ಅಂಶವನ್ನು ಬಾಲಕಿ ಹೊರಗೆಡಹಿದ್ದಾಳೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಸ್ಪಷವಾದ ಮಾಹಿತಿಯನ್ನು ಮಹಜರಿನ ವೇಳೆ ತಿಳಿಸಿದ್ದಾಳೆ. ಆದರೆ ಆಕೆ ಮಾತ್ರ ಹನುಮಂತನ ಹೆಸರು ಹೇಳಿದ್ದು, ಕೇಶವನ ಹೆಸರು ಹೇಳಿರಲಿಲ್ಲ. ಇನ್ನುಳಿದ ಬಾಲಕಿಯರಲ್ಲಿ ವಿಚಾರಿಸಿದಾಗ ಮತ್ತೆ ಐವರು ಮಕ್ಕಳು ಅತ್ಯಾಚಾರ ನಡೆಸಿರುವುದನ್ನು ಹೇಳಿದ್ದಾರೆ ಎನ್ನಲಾಗಿದೆ. ಅದರಲ್ಲಿ ಒಬ್ಬಾಕೆ ಕೇಶವ ಕೋಟೇಶ್ವರ ಅತ್ಯಾಚಾರ ನಡೆಸಿರುವುದಾಗಿ ಹೇಳಿದ್ದು, ಆರೋಪಿ ಕೇಶವನ ವಿರುದ್ಧ ಅಪ್ರಾಪ್ತೆ ಬಾಲಕಿಯ ಅತ್ಯಾಚಾರ ಹಾಗೂ ಇತರ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಬೆಂಬಲ ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ಆರೋಪದಡಿಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸತ್ಯ ತೆರೆದಿಟ್ಟ ಬಾಲಕಿ : ಹತ್ತು ವರ್ಷ ಪ್ರಾಯದ ಆ ಬಾಲಕಿ ಮೂಲತಃ ಶಿವಮೊಗ್ಗದವಳು. ಪಾಲಕರಿಲ್ಲದ ಅನಾಥ ಮಗುವಿನ ರಕ್ಷಣೆಯ ಹೊಣೆಯನ್ನು ಸ್ಪೂರ್ತಿಧಾಮಕ್ಕೆ ನೀಡಲಾಗಿತ್ತು. ಅವಳನ್ನು ಜನವರಿ 14 ರಂದು ಕುಪ್ಪೆಪದವು ಕೊಪ್ಪಲು ಎಂಬಲ್ಲಿಯ ಪೋಷಕರಿಗೆ ದತ್ತು ನಿಯಮದಂತೆ ನೀಡಲಾಗಿತ್ತು. ಆದರೆ ಅಲ್ಲಿ ಆಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಆಕೆಗೆ ಇದ್ದಕ್ಕಿದ್ದಂತೆ ಒಂದು ದಿನ ರಕ್ತವಾಂತಿಯಾಗಿದ್ದು, ಪೋಷಕರು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಜಲ್ಲಿ ಕಲ್ಲನ್ನು ಪುಡಿ ಮಾಡಿ ತಿಂದಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ವಾಪಾಸು ಕರೆತಂದು ಬಿಡುವುದಾಗಿ ಮಾರ್ಚ್ 12ರಂದು ಕರೆತಂದಿದ್ದರು. ದತ್ತು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಮಗುವನ್ನು ವಾಪಾಸು ಕರೆಯಿಸಿಕೊಳ್ಳಲು ದತ್ತು ಸಮಿತಿ ಒಪ್ಪಿಗೆ ಸೂಚಿಸಿತ್ತು. ಆದರೆ ಬಾಲಕಿ ಸ್ಪೂರ್ತಿಧಾಮದಲ್ಲಿ ಇರಲೊಪ್ಪದೇ ಅದೇ ದಿನ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೇಳದೇ ಹೊರಟಿದ್ದಳು.
ಅನಾಥ ಮಕ್ಕಳ ದತ್ತು ನೀಡುವ ಹಕ್ಕನ್ನು ಸ್ಪೂರ್ತಿಧಾಮಕ್ಕೆ ನೀಡಲಾಗಿದ್ದು, ಇದನ್ನೇ ವ್ಯವಹಾರ ಮಾಡಿಕೊಂಡ ಸ್ಪೂರ್ತಿಯ ಕೇಶವ ಸಾಕಷ್ಟು ಅವ್ಯವಹಾರ ನಡೆಸಿದ್ದಾನೆ ಎಂದು ಸ್ಥಳೀಯರು ದಶಕಗಳಿಂದೀಚೆಗೆ ಆರೋಪಿಸುತ್ತಲೇ ಬಂದಿದ್ದರು. ವೃದ್ಧಾಶ್ರಮದಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಕಳೆದ ಹಲವು ವರ್ಷಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದಕ್ಕೆ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರನ ಕುಮ್ಮಕ್ಕಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದಲ್ಲದೇ ಸ್ವತಃ ಕೇಶವ ಕೋಟೇಶ್ವರನ ಪತ್ನಿ ಪ್ರಮೀಳಾ ವಾಜ್ ಕೂಡಾ ಈ ಹಿಂದೆ ಬಹಿರಂಗವಾಗಿ ಹೇಳಿದ್ದರೂ ಇಲಾಖೆಗಳು ನಿರ್ಲಕ್ಷ್ಯವಹಿಸಿದ್ದವು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಪುತ್ರಾಡೋ ಎಂಬುವರು ಈ ಬಗ್ಗೆ ಪ್ರತಿಕ್ರಿಯಿಸಿ ನಾನಿನ್ನೂ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ಬೆಂಗಳೂರಿನಲ್ಲಿರುವುದರಿಂದ ಫೈಲ್ ನೋಡಲಾಗಿಲ್ಲ. ಪೋಕ್ಸೋ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪೋಕ್ಸೋ ಪ್ರಕರಣ ಸಿಡಬ್ಲ್ಯೂಸಿ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವೇ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಕ್ರಿಮಿನಲ್ ಕೇಶವ : ಸ್ಪೂರ್ತಿಧಾಮ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರ ಕ್ರಿಮಿನಲ್ ಎಂದು ಸ್ಥಳೀಯ ಯುವಕ ಮಂಡಲದ ಸದಸ್ಯರು ಆರೋಪಿಸಿದ್ದಾರೆ. ಕೊರಗ ಮಕ್ಕಳ ಹೆಸರಿನಲ್ಲಿ ಆರಂಭಿಸಿದ್ದ ಸಂಸ್ಥೆಯನ್ನು ಕೊರಗ ಮಕ್ಕಳ ಅನುದಾನವನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಅನ್ನಾಹಾರ ನೀಡದೇ ಹಿಂಸಿಸುತ್ತಿದ್ದ ಎನ್ನುವ ಆರೋಪಗಳೂ ಕೇಳಿಬಂದಿತ್ತು.
ಸಂಸ್ಥೆಯ ಒಳಗೆ ದಲಿತ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದ ಆರೋಪದಡಿಯಲ್ಲಿ ದಲಿತ ದೌರ್ಜನ್ಯ ಪ್ರಕರಣವೂ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಹಲವು ಮಕ್ಕಳಿಗೆ ಹಲ್ಲೆ ನಡೆಸಿದ್ದನ್ನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದ ಮಕ್ಕಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಸಂಸ್ಥೆಯಲ್ಲಿದ್ದ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಇರುವುದನ್ನು ಸ್ವತಃ ಆತನ ಪತ್ನಿಯೇ ಬಹಿರಂಗಗೊಳಿಸಿದ್ದಾಳೆ. ಈ ಪ್ರಕರಣದಲ್ಲಿ ಇನ್ನೂ ಹಲವು ಕೈಗಳಿದ್ದು, ಕೆಲವು ಪತ್ರಕರ್ತರು, ಪೊಲೀಸ್ ಸಿಬ್ಬಂದಿಗಳು ಪಾಲುದಾರರಾಗಿದ್ದಾರೆ ಎನ್ನುವ ಆರೋಪಗಳೂ ಕೇಳಿಬಂದಿದ್ದವು. ಇದೀಗ ಜಿಲ್ಲಾಡಳಿತದ ಕ್ರಮಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೇ ಶಿಕ್ಷೆ ನೀಡುವಂತಾಗಬೇಕು ಎನ್ನುವುದೇ ಸಾರ್ವಜನಿಕರ ಆಗ್ರಹ.