ಪುತ್ತೂರು, ಫೆ 11 (DaijiworldNews/DB): ಪಿಎಫ್ಐಯನ್ನು ನಿಷೇಧಿಸುವ ಮೂಲಕ ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸುರಕ್ಷಿತ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಟಿಪ್ಪು ಆರಾಧಕರಿಗೆ ಮತ ನೀಡದಿರಿ. ರಾಣಿ ಅಬ್ಬಕ್ಕರ ಆರಾಧನೆ ಮಾಡುವ ನಮಗೆ ಮತ ನೀಡಿ. ನಮಗೆ ನೀಡುವ ಒಂದೊಂದು ಮತವೂ ನವ ಭಾರತ ನಿರ್ಮಾಣಕ್ಕೆ ನೀಡುವ ಮತವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಕರ್ನಾಟಕ ಸುರಕ್ಷಿತವಾಗಿರಲಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿಲ್ಲ. ರೈತರ ಕಲ್ಯಾಣ ಮಾಡಿದ ಕೆಲಸದಿಂದಾಗಿ ಯಡಿಯೂರಪ್ಪ ಅವರನ್ನು ದೇಶದ ಪ್ರತಿ ಜನರು ನೆನಪಿಸುತ್ತಾರೆ. ಚುನಾವಣಾ ಪ್ರಚಾರಕ್ಕಾಗಿ ಇನ್ನೊಮ್ಮೆ ನಿಮ್ಮ ಜಿಲ್ಲೆಗೆ ಬರುತ್ತೇನೆ ಎಂದವರು ಹೇಳಿದರು.
ಪರಶುರಾಮನ ಸೃಷ್ಟಿಯ ಈ ಊರು ಬಹಳ ಪವಿತ್ರವಾದುದು. ಕಾಂತಾರ ಚಿತ್ರವನ್ನು ವೀಕ್ಷಿಸಿದ್ದೆ. ಈ ಪ್ರದೇಶದ ಸಮೃದ್ದ ಪರಂಪರೆಗೆ ಮನಸ್ಸು ತುಂಬಿ ಬಂತು ಎಂದವರು ಶ್ಲಾಘಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕ್ಯಾಂಪ್ಕೋ ಮಾದರಿ ಸಂಸ್ಥೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಕೋ ಕುಸಿದಾಗ ಚಾಕಲೇಟ್ ಫ್ಯಾಕ್ಟರಿ ಮಾಡಿ ದೇಶಕ್ಕೇ ಈ ಸಂಸ್ಥೆ ಮಾದರಿಯಾಯಿತು. ರೈತರ ಪಾಲಿಗೂ ಈ ಸಂಸ್ಥೆ ಆಶಾಕಿರಣ ಎಂದು ಅಮಿತ್ ಶಾ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಎಸ್. ಸುನಿಲ್ ಕುಮಾರ್. ಎಸ್. ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.