ಕಾರ್ಕಳ, ಫೆ 11 (DaijiworldNews/DB): ಹಿಂದುತ್ವದ ಉಳಿವಿಗಾಗಿ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ನಾನೊಬ್ಬ ಸನ್ಯಾಸಿ. ಕಾರ್ಯಕರ್ತರು ನನ್ನ ಆಸ್ತಿ, ಪ್ರಾಮಾಣಿಕತೆ, ಹಿಂದುತ್ವ ನನಗೆ ಶ್ರೀರಕ್ಷೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾರ್ಕಳ ಪರಪುನಲ್ಲಿ ನೂತನ ಕಾರ್ಯಾಲಯ ಪಾಂಚಜನ್ಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಲ ನನ್ನಲ್ಲಿಲ್ಲ. ನನ್ನಲ್ಲಿ ಯಾವುದೇ ಬ್ಯಾಂಕ್ ಖಾತೆಗಳಿಲ್ಲ. ನನಗೆ ವೋಟಿನ ಜೊತೆ ನೂರರ ನೋಟು ಕೊಡಿ. ಕಾರ್ಯಕರ್ತರ ಖರ್ಚಿಗೆ ಹಣದ ಸಹಕಾರ ನೀಡಿ. ನಾನು ಆ ಋಣ ತೀರಿಸಲು ಬದ್ದ ಎಂದರು.
ರಾಜ್ಯದ 5 ಕಡೆಗಳಲ್ಲಿ ಸ್ವಾಮೀಜಿಗಳು ಸೇರಿದಂತೆ ಪ್ರಭಾವಿಗಳು ಸ್ಪರ್ಧಿಸಲಿದ್ದಾರೆ. ಕ್ಷೇತ್ರ ಹಾಗೂ ವ್ಯಕ್ತಿಗಳ ಹೆಸರನ್ನು ಮುಂಬರುವ ದಿನಗಳಲ್ಲಿ ಬಹಿರಂಗಗೊಳಿಸಲಾಗುವುದು ಎಂದವರು ತಿಳಿಸಿದರು.
ಕೇಂದ್ರ ಸರ್ಕಾರದ ಅನುದಾನದಿಂದ ರಾಜ್ಯದ ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ. ರಾಜ್ಯ ಸರ್ಕಾರದ ವತಿಯಿಂದ ರಸ್ತೆಗಳಿಗೆ ಬಂದ ಅನುದಾನದ ಬಗ್ಗೆ ಸಚಿವ ಸುನಿಲ್ ಕುಮಾರ್ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಮೂರು ವರ್ಷಗಳಿಂದ ಕಾರ್ಕಳ ತಾಲೂಕು ಗ್ರಂಥಾಲಯ ಉದ್ಘಾಟನೆಗೊಂಡಿಲ್ಲ, ಹೆಬ್ರಿ ಸರಕಾರಿ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮಾರ್ಪಡಿಸಬೇಕು. ನಗರದ ಮುಖ್ಯ ರಸ್ತೆಗಳಷ್ಟೇ ಅಭಿವೃದ್ಧಿಗೊಂಡಿವೆ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಹೇಳಿದರು.
ಉಳ್ಳಾಲದಲ್ಲಿ ಸ್ಪರ್ಧಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ಕಾರ್ಕಳ ನನ್ನ ಆಯ್ಕೆಯಾಗಿದ್ದು, ಅದೇ ಅಂತಿಮ ಎಂದರು.
ಕಲಬುರಗಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ನಡೆದ ಧರ್ಮ ದಂಗಲ್, ಹಿಜಾಬ್ ವಿಚಾರಗಳು, ಅಜಾನ್ ಸಮಸ್ಯೆಗಳು, ಗೋಕಳ್ಳತನ, ಗೋಹತ್ಯೆ ಸಂಬಂಧಿ ಹೋರಾಟಗಳಲ್ಲಿ ಕೂಡ ಸಚಿವ ಸುನಿಲ್ ಕುಮಾರ್ ಕಾರ್ಯಕರ್ತರಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ವಕೀಲ ಹರೀಶ್ ಅಧಿಕಾರಿ, ಪುರಸಭಾ ಸದಸ್ಯ ಲಕ್ಷಿನಾರಾಯಣ ಮಲ್ಯ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.