ಉಪ್ಪಿನಂಗಡಿ, ಫೆ 11 ( DaijiworldNews/MS): ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತನನ್ನು ಕುಪ್ಪೆಟ್ಟಿ ನಿವಾಸಿ ಕೂಲಿ ಕಾರ್ಮಿಕ ಇಬ್ರಾಹಿಂ ಯಾನೆ ಅಬ್ಬೊನು ಅವರ ಪುತ್ರ ಅಬೂಬಕ್ಕರ್ ಸಿದ್ದಿಕ್ (16) ಎಂದು ಗುರುತಿಸಲಾಗಿದೆ.
ಸಿದ್ದಿಕ್ ತನ್ನ ಸ್ನೇಹಿತ ಮುಹಮ್ಮದ್ ಕಲೀಲ್ನೊಂದಿಗೆ ದ್ವಿಚಕ್ರ ವಾಹನದಲ್ಲಿ ಕರಾಯ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹೋಗುತ್ತಿದ್ದ ಸಂದರ್ಭ ಶಿವಗಿರಿ ಬಳಿ ಗೂಡ್ಸ್ ರಿಕ್ಷಾ ದ ಹಿಂಬದಿಗೆ ಇವರ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿತ್ತು. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಸಿದ್ದಿಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮುಹಮ್ಮದ್ ಕಲೀಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಈತ ಪ್ರತಿಭಾವಂತನಾಗಿದ್ದ. ಮೃತನು ತಂದೆ, ತಾಯಿ, ಸಹೋದರಿ ಹಾಗೂ ಆರು ಮಂದಿ ಸಹೋದರರನ್ನು ಅಗಲಿದ್ದಾನೆ.