ಉಳ್ಳಾಲ, ಫೆ 10 ( DaijiworldNews/MS): ಹೆತ್ತವರ ವಾಟ್ಸ್ಯಾಪ್ ಗ್ರೂಪಿನಲ್ಲಿ ಹೋಂ ವರ್ಕ್ ಮಾಡದ ವಿದ್ಯಾರ್ಥಿಗಳ ಫೋಟೋ ಹಾಕಿದ ಶಿಕ್ಷಕಿಯ ನಡೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದೇರಳಕಟ್ಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗಳ ಫೋಟೋಗಳನ್ನು ಹೆತ್ತವರ ಗ್ರೂಪಿನಲ್ಲಿ ಹಾಕಲಾಗಿದೆ. ಕನ್ನಡದ ಮೂರು ಪ್ರಶ್ನೆಗಳನ್ನು ಉತ್ತರಿಸದ ಮಕ್ಕಳು, ಗಣಿತ ಹೋಂ ವರ್ಕ್ ಬರೆಯದವರು. ಕನ್ನಡ ಕಾಪಿ ಬರೆಯದವರು ಎಂದು ಫೋಟೋ ಕೆಳಗೆ ಬರೆದು ವಿದ್ಯಾರ್ಥಿಗಳ ಫೋಟೋಗಳನ್ನು ಹಾಕಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಾಲಾ ಶಿಕ್ಷಕಿ ಪ್ರತಿದಿನ ರಾತ್ರಿ ಒಂಭತ್ತು ಗಂಟೆಯ ನಂತರ ತನ್ನ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ಪಟ್ಟಿಯನ್ನು ಕಳಿಸುತ್ತಾರೆ. ಅದರಲ್ಲಿ ಯೂಟ್ಯೂಬ್ ನೋಡಿ ಕಲಿಯುವಂತಹದ್ದೂ ಇರುತ್ತದೆ, ಯೂಟ್ಯೂಬಿನಿಂದ ಬಟ್ಟಿ ಇಳಿಸಿ ಮಾಡಬೇಕಾದ ಪ್ರೋಜೆಕ್ಟ್ ಗಳೂ ಇರುತ್ತವೆ. ಇತರ ಶಾಲಾ ಅಭ್ಯಾಸ ಹೋಂ ವರ್ಕುಗಳೂ ಇರುತ್ತವೆ. ಪೋಷಕರ ಮೊಬೈಲ್ ನೆಟ್ ಮುಗಿದಿದ್ದರೂ, ಅಥವಾ ಯಾವುದೇ ಕಾರಣದಿಂದ ಮಕ್ಕಳು ಹೋಂ ವರ್ಕ್ ಮಾಡದಿದ್ದರೂ ಮರುದಿನ ಸಿಡಿಮಿಡಿಗೊಳ್ಳುತ್ತಾರೆ. ಮಕ್ಕಳನ್ನು ತಪ್ಪಿತಸ್ಥರಂತೆ ಬಿಂಬಿಸಿ ಪೋಟೋ ತೆಗೆದು ಗ್ರೂಪಿನಲ್ಲಿ ಹಾಕುತ್ತಾರೆ. ಈ ಫೋಟೊಗಳನ್ನು ನೋಡುವ ಮಕ್ಕಳ ಮನಸ್ಸಿಗೆ ಆಗುವ ಹಾನಿಗೆ ಯಾರು ಹೊಣೆ ? ಎಂದು ಪೋಷಕರು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.