ಉಳ್ಳಾಲ, ಫೆ 10 ( DaijiworldNews/MS): ಬೈಕ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಹೊಟೇಲ್ ಉದ್ಯೋಗಿ, ಝೊಮ್ಯಾಟೋ ಡೆಲಿವರಿ ಬಾಯ್ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ.
ಮೂಲತ: ಕ್ಯಾಲಿಕಟ್ ನಿವಾಸಿ, ಕುತ್ತಾರು ಸಂತೋಷನಗರದ ಬಾಡಿಗೆ ಮನೆಯಲ್ಲಿ ಇದ್ದ ಅನಿಲ್ ಕುಮಾರ್ (41) ಮೃತರು. ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಹಾಗೂ ಸಂಜೆ ನಂತರ ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ 11.00 ಸುಮಾರಿಗೆ ಮಂಜನಾಡಿಯ ಕಲ್ಕಟ್ಟದಿಂದ ಫುಡ್ ಡೆಲಿವರಿ ಆರ್ಡರ್ ಹಿಡಿದುಕೊಂಡು ತೆರಳುವ ಸಂದರ್ಭ ಎದುರಿನಿಂದ ಅಮಿತ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಕೇರಳ ನೋಂದಾಯಿತ ಅಬೂಬಕರ್ ಸಿದ್ದೀಖ್ ಎಂಬವರು ಚಲಾಯಿಸುತ್ತಿದ್ದ ಕಾರು ಅನಿಲ್ ಇದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಮನೆಯ ಕಂಪೌಂಡಿಗೆ ಎಸೆಯಲ್ಪಟ್ಟು, ಬಳಿಕ ರಸ್ತೆಗೆ ಉರುಳಿ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅಪಘಾತ ನಡೆದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ದೇರಳಕಟ್ಟೆ ಜ್ಯೂಸ್ ಮ್ಯಾಜಿಕ್ ಹೊಟೇಲ್ ಮ್ಹಾಲಕರಾದ ಶಾಜಿದ್ ಜಿ.ಎಂ ಮತ್ತು ಹಸನ್ ಎಂಬವರು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ತಡರಾತ್ರಿ 1.45ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಡೆಲಿವರಿ ಮಂದಿಗೆ ಕರೆ ಮಾಡಿದ್ದರು : ದೇರಳಕಟ್ಟೆ ಜ್ಯೂಸ್ ಮ್ಯಾಜಿಕ್ ಹೊಟೇಲಿನಿಂದ ಡೆಲಿವರಿ ಕೊಂಡೊಯ್ದು, ಕಲ್ಕಟ್ಟದ ಆರ್ಡರ್ ಮಾಡಿದ ಮಂದಿಗೆ ಅನಿಲ್ ಅವರು ಕರೆ ಮಾಡಿದ್ದರು. ಅಲ್ಲದೆ ಮನೆಯ ಸಮೀಪವೇ ಇದ್ದು ಹೊರಬರುವಂತೆ ತಿಳಿಸಿದ್ದರು. ಅಷ್ಟರಲ್ಲೇ ಅಪಘಾತ ನಡೆದಿತ್ತು. ಆರ್ಡರ್ ಮಾಡಿರುವ ಪಾರ್ಟಿಯವರಿಗೆ ಅಪಘಾತದ ಸದ್ದು ಕೇಳಿದ್ದು ವಾಪಸ್ಸು ಅನಿಲ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಹೊಟೇಲ್ ಮಾಲೀಕರಿಗೆ ಅಪಘಾತ ನಡೆದಿರುವ ವಿಚಾರವನ್ನು ಫುಡ್ ಆರ್ಡರ್ ಮಾಡಿರುವ ಪಾರ್ಟಿಯವರೇ ಮೊಬೈಲ್ ಮೂಲಕ ತಿಳಿಸಿದ್ದಾರೆ.
ಹೊಟೇಲ್ ಬಂದ್ : ಸಹೋದ್ಯೋಗಿಯ ಸಾವಿಗೆ ಕಂಬನಿ ಮಿಡಿದ ಸಹುದ್ಯೋಗಿಗಳು ಹಾಗೂ ಮಾಲೀಕರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಎದುರುಗಡೆ ಯಿರುವ ಜ್ಯೂಸ್ ಮ್ಯಾಜಿಕ್, ಐಸ್ ಮ್ಯಾಜಿಕ್ ಮತ್ತು ಬರ್ಗರ್ ಪಾಯಿಂಟ್ ಹೆಸರಿನ ಮೂರು ಹೊಟೇಲ್ ಗಳನ್ನು ಇಡೀ ದಿನ ಬಂದ್ ನಡೆಸಿ ಗೌರವ ಸಲ್ಲಿಸಿದ್ದಾರೆ. ಮೃತ ಅನಿಲ್ ಕುಮಾರ್ ತಾಯಿ ಕೆಲ ತಿಂಗಳುಗಳ ಹಿಂದಷ್ಟೇ ಮೃತಪಟ್ಟಿದ್ದರು. ಒಂಟಿಯಾಗಿದ್ದ ಅನಿಲ್ ಅವರಿಗೆ ವಿವಾಹವಾಗಲು ಹೊಟೇಲ್ ಮಾಲೀಕ ಸಾಜಿದ್ ಅವರು ಹುಡುಗಿಯನ್ನು ಹುಡುಕಿದ್ದರು. ಇದೇ ಖುಷಿಯಲ್ಲಿ ಫೆ.8 ರಂದು ಕ್ಯಾಲಿಕಟ್ ನ ದೇವಸ್ಥಾನಗಳಿಗೆ ತೆರಳಿದ್ದ ಅನಿಲ್ ಕುಮಾರ್ ನಿನ್ನೆ ಸಂಜೆಯಷ್ಟೇ ಹೊಟೇಲಿಗೆ ವಾಪಸ್ಸಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮೃತರ ಅಂತಿಮ ಕ್ರಿಯೆಗೆ ಊರಿನಲ್ಲೇ ನಡೆಸುವ ಹಿನ್ನೆಲೆಯಲ್ಲಿ ಝೊಮ್ಯಾಟೋ ಡೆಲಿವರಿ ಹುಡುಗರು ಹಾಗೂ ಹೊಟೇಲ್ ಮಾಲೀಕರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.