ಉಡುಪಿ,ಮಾ.14(AZM):ಅಕ್ರಮವಾಗಿ ಸಾಗಿಸುತ್ತಿದ್ದ 10 ಟನ್ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಹಿರಿಯಡ್ಕ ಪೇಟೆಯ ಬಳಿ ಮಾ.13ರಂದು ನಡೆದಿದೆ.
ಡಿ.ಸಿ.ಐ.ಬಿ. ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಸಿ,.ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ, 10 ಟನ್ ಅಕ್ಕಿಯನ್ನು ಪತ್ತೆಮಾಡಿ ವಶಪಡಿಸಲಾಗಿದೆ. ಹಾಗೂ ಉಡುಪಿ ತಹಶೀಲ್ದಾರರ ಮುಖಾಂತರ ಆಹಾರ ನಿರೀಕ್ಷಕರು ಲಾರಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಇನ್ನು ಪೆರ್ಡೂರು ರಥಬೀದಿಯ ಬಳಿ ರಾಜೇಶ್ ನಾಯಕ್ ಎಂಬುವವರ ಗೋದಾಮಿನಲ್ಲಿದ್ದ ಸುಮಾರು 130 ಚೀಲ ಅಕ್ಕಿ ಹಾಗೂ, ಸುಮಾರು 400 ಖಾಲಿ ಗೋಣಿ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲಾರಿ ಚಾಲಕ ಸಿ.ಪಿ.ಶಫೀಕ್ (36) ಎಂಬುವನನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ರಾಜೇಶ್ ನಾಯಕ್ ಎಂಬವನು ಪರಾರಿಯಾಗಿದ್ದಾನೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈ ಶಂಕರ್ ರವರ ಮಾರ್ಗದರ್ಶನದಲ್ಲಿ, ಡಿ.ಸಿ.ಐ.ಬಿ. ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಸಿ,ಯವರು, ತಮ್ಮ ಸಿಬ್ಬಂದಿಗಳೊಡನೆ ಸೇರಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.