ಉಡುಪಿ, ಫೆ 10 ( DaijiworldNews/MS): ಕವಿ ಮುದ್ದಣ ಮಾರ್ಗ ಇಲ್ಲಿಯ ತ್ರಿವೇಣಿ ಸರ್ಕಲ್ ಬಳಿ, ಸಿಗ್ನಲ್ ಕಂಬ ನಿರ್ಮಾಣ ಮಾಡಲು, ಆಳದ ಗುಂಡಿ ಅಗೆದಿಡಲಾಗಿದ್ದು, ನಿಧಾನ ಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಬಹಳ ಸಮಸ್ಯೆಗಳು ಎದುರಾಗಿದ್ದು, ಕಾಮಗಾರಿ ವೇಗಗತಿಯಿಂದ ಬೇಗನೆ ಪೂರ್ಣಗೊಳಿಸ ಬೇಕೆಂದು ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.
ಸಿಗ್ನಲ್ ಪಿಲ್ಲರಿಗೆ ಗುಂಡಿ ಅಗೆಯುವಾಗ ಮುಖ್ಯ ಡ್ರೈನೆಜ್ ಕೊಳವೆ ಘಾಸಿಗೊಂಡಿದ್ದು, ಅಗೆದಿರುವ ಗುಂಡಿಯಲ್ಲಿ ತ್ಯಾಜ್ಯ ನೀರು ಬಹಳ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಪರಿಸರದಲ್ಲಿ ದುರ್ನಾತ ಹಬ್ಬಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಸನಿಹದಲ್ಲಿ ಹೋಟೆಲುಗಳು ಇವೆ. ಮಾರಕ ಸೊಳ್ಳೆಗಳು ಉತ್ಪತ್ತಿಯಾಗುವ ಲಕ್ಷಣಗಳು ಇಲ್ಲಿವೆ. ಸೂಕ್ತವಾದ ದಾರಿದೀಪದ ವ್ಯವಸ್ಥೆ ಇಲ್ಲಿಲ್ಲದೆ ಇರುವುದರಿಂದ, ವಾಹನ ಸವಾರರು, ಪಾದಚಾರಿಗಳು ರಾತ್ರಿ ಸಮಯದಲ್ಲಿ ತ್ಯಾಜ್ಯ ನೀರಿರುವ ಗುಂಡಿಗೆ ಬೀಳುವ ಸಾಧ್ಯತೆ ಇದೆ, ಅಲ್ಲದೆ ಇಲ್ಲಿ ವಾಹನ ದಟ್ಟಣೆ ಇರುವುದರಿಂದ ಸುಗಮ ಸಂಚಾರಕ್ಕೂ ಸಮಸ್ಯೆ ಎದುರಾಗಿದೆ. ಹಾಗಾಗಿ ಇತ್ತ ನಗರಸಭೆ ಅಧಿಕಾರಿಗಳು ಗಮನಹರಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.