ಕುಂದಾಪುರ, ಫೆ 10 ( DaijiworldNews/MS): ಕುಂದಾಪುರ ಕೋಡಿಯ ಸೀವಾಕ್ ಇಂದು ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪಂಚಗಂಗಾವಳಿಗೆ ಬ್ರೇಕ್ ವಾಟರ್ ನಿರ್ಮಾಣದಿಂದ ರಚನೆಯಾದ ಸೀವಾಕ್ ಇವತ್ತು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಷ್ಟೊಂದು ವಿಶಾಲವಾದ ಸೀವಾಕ್ ವೀಕ್ಷಣ ಪಥ ಈ ಭಾಗದ ಕರಾವಳಿ ತೀರದಲ್ಲಿ ಎಲ್ಲಿಯೂ ಇಲ್ಲ. ಸಮುದ್ರದ ರುದ್ರ ರಮಣೀಯ ದೃಶ್ಯಗಳೊಂದಿಗೆ ಹತ್ತಾರು ನಿಸರ್ಗದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಇಲ್ಲಿ ವಿಫುಲ ಅವಕಾಶಗಳಿವೆ. ಜಾಗತಿಕ ಭೂಪಟದಲ್ಲಿ ಕೋಡಿಯ ಸೀ ವಾಕ್ ಸ್ಥಾನ ಪಡೆದುಕೊಳ್ಳುತ್ತಿದೆ. ದಿನವೂ ಬೇರೆ ಬೇರೆ ಭಾಗದಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಶನಿವಾರ, ಆದಿತ್ಯವಾರ ಹಬ್ಬದ ವಾತಾವರಣ ಇಲ್ಲಿ ನಿರ್ಮಾಣವಾಗುತ್ತದೆ.
ವೇಗವಾಗಿ ಜನಾಕರ್ಷಣೆ ಪಡೆದುಕೊಳ್ಳುತ್ತಿರುವ ಸೀವಾಕ್ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸೀವಾಕ್ ನ ವೇಗಕ್ಕೆ ತಕ್ಕಂತೆ ಪ್ರವಾಸೋಧ್ಯಮ ಇಲಾಖೆ ಹೆಜ್ಜೆ ಹಾಕದ ಪರಿಣಾಮ ಇವತ್ತು ಪ್ರವಾಸಿಗರಿಗೆ ಶೌಚಾಲಯ, ಪಾರ್ಕಿಂಗ್ ಮುಂತಾದ ಮೂಲ ಸೌಕರ್ಯಗಳ ಸಮಸ್ಯೆ ಕಾಡುತ್ತಿದೆ.
ಸೀವಾಕ್ನ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಶೌಚಾಲಯಕ್ಕೆ ಇಲ್ಲಿ ಪ್ರವಾಸಿಗರು ಪರದಾಡಬೇಕು. ಅಕ್ಕಪಕ್ಕದ ಮನೆ, ಹೋಟೆಲ್ಗಳ ಶೌಚಾಲಯಗಳನ್ನು ಆಶ್ರಯಿಸಬೇಕು. ಇದು ಕಿರಿಕಿರಿ ಉಂಟು ಮಾಡುವ ವಿಚಾರ. ಶೌಚಾಲಯ ಇಲ್ಲದೇ ಪ್ರವಾಸಿಗರು ಇಲ್ಲಿ ನಿತ್ಯ ಪರದಾಡುವುದನ್ನು ಕಾಣಬಹುದು. ಇಲಾಖೆ ಇಲ್ಲಿ ಶೌಚಾಲಯ ನಿರ್ಮಾಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕಿತ್ತು. ಆ ಕೆಲಸ ಇನ್ನೂ ಕೂಡಾ ಆಗಿಲ್ಲ.ಕೋಡಿ ಸೀವಾಕ್ಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲ. ಮರಳು ದಿಬ್ಬಗಳ ಮೇಲೆ ವಾಹನ ನಿಲ್ಲಿಸಬೇಕಾದ ಸ್ಥಿತಿ ಇದೆ. ಇಲ್ಲಿ ಸಾಕಷ್ಟು ಸರ್ಕಾರಿ ಸ್ಥಳ ಇದೆ. ಮರಳು ರಾಶಿಯ ಮೇಲೆ ಮಣ್ಣು ತುಂಬಿಸಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯತೆಗಳಿವೆ.
ಈಗಾಗಲೇ ಮೆಟ್ಟಿಲು, ಕುರ್ಚಿಗಳನ್ನು ದಾನಿಗಳು, ಸಂಘ ಸಂಸ್ಥೆಗಳು ಕೊಡಮಾಡಿವೆ. ಸಿಸಿ ಕ್ಯಾಮರಾ ವ್ಯವಸ್ಥೆ ಇದೆ. ಮುಂದೆ ಮೂಲ ಸೌಕರ್ಯ ವೃದ್ದಿ,ವ್ಯವಸ್ಥಿತವಾಗಿ ವಿಹಾರ ನಡೆಸಲು ಅನುಕೂಲ ಕಲ್ಪಿಸಿಕೊಡಲುವಲ್ಲಿ ಇಲಾಖೆ ಮುಂದಾಗಬೇಕಿದೆ.
ಇಲ್ಲಿ ಟ್ರೀಪಾರ್ಕ್ ನಿರ್ಮಾಣದ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಲೈಟ್ ಹೌಸ್ ತನಕ ಟ್ರೀ ಪಾರ್ಕ್ ಆದರೆ ಸೀ ವಾಕ್ ಇನ್ನಷ್ಟು ಪ್ರವಾಸಿಗರ ಆಕರ್ಷಿಸುತ್ತದೆ. ಆದರೆ ಮೂಲಸೌಕರ್ಯ ವೃದ್ದಿಸಬೇಕಿದೆ.
ಬೋಟಿಂಗ್ಗೆ ವ್ಯಾಪಕ ಬೇಡಿಕೆ:
ಕೋಡಿ ಸೀವಾಕ್ನ ಬೋಟಿಂಗ್ ಮಾಡಲು ಜನ ಆಗಮಿಸುತ್ತಾರೆ. ಇಲ್ಲಿ 8 ಕಿ.ಮೀ ಸಮುದ್ರಯಾನ ನಡೆಯುತ್ತದೆ. ಮ್ಯಾಂಗ್ರೋ ಫಾರೆಸ್ಟ್, ಡಾಲ್ಫಿನ್ ಪಾಯಿಂಟ್, ರಾಕ್ ಐಲೆಂಡ್ ಮುಂತಾದ ಅಪೂರ್ವ ದೃಶ್ಯಗಳನ್ನು ಬೋಟಿಂಗ್ ಮೂಲಕ ಕಣ್ತುಂಬಿಸಿಕೊಳ್ಳುತ್ತಾರೆ. ಇವತ್ತು ಕೋಡಿಯಲ್ಲಿ 8-9 ಬೋಟಿಂಗ್ಗಾಗಿಯೇ ಮೀಸಲಿರುವ ಬೋಟ್ಗಳಿವೆ. ಸರದಿಯಂತೆ ಪ್ರವಾಸಿಗರು ಬೋಟ್ ಗೊತ್ತು ಪಡಿಸಿ ಸಮುದ್ರಯಾನ ಮಾಡಬಹುದಾಗಿದೆ. ಬೋಟಿಂಗ್ಗೆ ತುಂಬಾ ಬೇಡಿಕೆ ಇದೆ. ಡಾಲ್ಫಿನ್ ಪಾಯಿಂಟ್ ಹಾಗೂ ಮ್ಯಾಂಗ್ರೋ ಫಾರೆಸ್ಟ್ ಜನಾಕರ್ಷಣೆಯ ಕೇಂದ್ರಗಳಾಗಿವೆ.
“ಕೋಡಿ ಸೀವಾಕ್ ದಿನದಿಂದ ದಿನಕ್ಕೆ ಜನಾರ್ಕಣೆ ಪಡೆದುಕೊಳ್ಳುತ್ತಿದೆ. ನಾನು 2019ರಲ್ಲಿ ಬೋಟಿಂಗ್ ಆರಂಭಿಸಿದೆ. ಆಗ ಒಂದೇ ಬೋಟ್ ಇತ್ತು. ಇವತ್ತು 8-9 ಬೋಟ್ಗಳಿವೆ. ಇಲ್ಲಿ ಶೌಚಾಲಯಗಳ ನಿರ್ಮಾಣವಾಗಬೇಕು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಆಗಬೇಕು. ಹೊರ ಭಾಗದಿಂದ ಬರುವ ಪ್ರವಾಸಿಗರಿಗೆ ಅನುಕೂಲತೆಗಳನ್ನು ಇಲಾಖೆ ಕಲ್ಪಿಸಿಕೊಡಬೇಕು".-ನಾಗರಾಜ್ ಕಾಂಚನ್ಪುರಸಭೆ ನಾಮನಿರ್ದೇಶನ ಸದಸ್ಯ