ಮಂಗಳೂರು, ಫೆ 10 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದ.ಕ. ಜಿಲ್ಲಾ ಭೇಟಿಯ ಹಿನ್ನೆಲೆಯಲ್ಲಿ ಬಂದೋಬಸ್ತ್ ಕುರಿತು ಪರಿಶೀಲಿಸಲು ಫೆಬ್ರವರಿ 9ರಂದು ಗುರುವಾರ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಜಿಲ್ಲೆಗೆ ಆಗಮಿಸಿದ್ದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಆಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಿದ್ದು, ಫರಂಗಿಪೇಟೆಯಲ್ಲಿ ಹೊರಠಾಣೆ ಸ್ಥಾಪಿಸುವಂತೆ ಮನವಿ ಮಾಡಲಾಗಿತ್ತು. ಸಿಬ್ಬಂದಿಯನ್ನು ಬಲಪಡಿಸಲು ಕೂಡಾ ಹಲವರಿಂದ ಒತ್ತಾಯ ಕೇಳಿ ಬಂದಿದೆ. ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ವಿಳಂಬವಾಗಿ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದಾಗಿಯೂ ದೂರು ಕೇಳಿ ಬಂದಿದೆ. ನಿಯಮಿತವಾಗಿ ಎಸ್ಸಿ/ಎಸ್ಟಿ ಸಭೆ ನಡೆಸುವಂತೆ ಜನ ಮನವಿ ಮಾಡಿದ್ದಾರೆ ಎಂದರು.
ಕುಂದುಕೊರತೆಗಳ ಸಭೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಪೊಲೀಸರು ಹಾಜರಾಗದ ಸಾರ್ವಜನಿಕರ ನಿಜವಾದ ಕುಂದುಕೊರತೆಗಳನ್ನು ಸ್ವೀಕರಿಸುವುದು. ಅಂತಹ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು. ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಇದರಿಂದ ಹೆಚ್ಚಿನ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅಲೋಕ್ಕುಮಾರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ನಲ್ಲಿ ಭ್ರಷ್ಟಾಚಾರ ಆರೋಪ, ವೈದ್ಯರು, ಮೆಡಿಕೋ ಡ್ರಗ್ ಪ್ರಕರಣ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಆರೋಪಗಳು ನಿರ್ದಿಷ್ಟವಾಗಿರಬೇಕು. ದೂರುಗಳು ನೈಜತೆಯಿಂದ ಕೂಡಿರಬೇಕು. ಹಾಗಿದ್ದಲ್ಲಿ ಮಾತ್ರ ಅಂತಹವುಗಳ ವಿರುದ್ದ ಕ್ರಮ ಕೈಗೊಳ್ಳಬಹುದು. ಎಫ್ಐಆರ್ ದಾಖಲಾದ ಬಳಿಕ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದರು.
ಭ್ರಷ್ಟಾಚಾರ ಆರೋಪದ ಮೇಲೆ ಕಾರ್ಯಕರ್ತರೊಬ್ಬರು ಸಲ್ಲಿಸಿದ ಲೋಕಾಯುಕ್ತ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರು ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ನಿರ್ದೇಶನದ ಮೇರೆಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಕೋಮು ಹತ್ಯೆಗಳ ತಡೆಗಟ್ಟುವ ಕ್ರಮಗಳ ಕುರಿತು ಮಾತನಾಡಿದ ಅವರು, ಕಳೆದ ಬಾರಿ ಮಂಗಳೂರಿಗೆ ಭೇಟಿ ನೀಡಿದಾಗ ಮೊಹಲ್ಲಾ ಮತ್ತು ಯುವ ಸಮಿತಿ ರಚಿಸಲು ಸೂಚನೆ ನೀಡಿದ್ದೆ. ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. 18-40 ವಯೋಮಾನದ ಜನರನ್ನು ಒಳಗೊಂಡ ಸಮಿತಿ ಸಭೆ ನಡೆಸುವ ಅವಶ್ಯಕತೆಯಿದೆ. ಜಿಲ್ಲೆ ಮತ್ತು ಮಂಗಳೂರು ಪೊಲೀಸ್ ಕಮಿಷನರೇಟ್ನಲ್ಲಿ 5-6 ಸೂಕ್ಷ್ಮ ಪೊಲೀಸ್ ಠಾಣೆಗಳಿದ್ದು, ಆ ಪ್ರದೇಶಗಳಲ್ಲಿ ಇಂತಹ ಸಭೆಗಳನ್ನು ನಡೆಸಬೇಕಾಗಿದೆ. ಪೊಲೀಸರು ಸುಮ್ಮನೆ ಕೈ ಎತ್ತಿ ಶರಣಾಗಲು ಸಾಧ್ಯವಿಲ್ಲ. ಕೆಲವು ಸುಧಾರಣೆಗಳು ಇರಬಹುದು ಮತ್ತು ಘಟನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಪ್ರಾಮಾಣಿಕವಾಗಿ ಮಾಡಿದರೆ ಫಲ ಸಿಗುತ್ತದೆ. ಹಿರಿಯ ಅಧಿಕಾರಿಗಳೂ ಗಸ್ತು ತಿರುಗಬೇಕು ಎಂದರು.
ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾ ಎಸ್ಪಿ ಡಾ. ವಿಕ್ರಮ್ ಅಮಾತೆ ಉಪಸ್ಥಿತರಿದ್ದರು.