ಬಂಟ್ವಾಳ, ಫೆ 09 (DaijiworldNews/DB): "ಮಂಡಕ್ಕಿ ಬೇಕಾ.. ಮಂಡಕ್ಕೀ..." ಎನ್ನುತ್ತ ತಲೆಮೇಲೆ ಮಂಡಕ್ಕಿ ( ಕುರ್ಲರಿ) ಮೂಟೆ ಹೊತ್ತು ಊರೂರು ಸುತ್ತುತ್ತಾ ಮಂಡಕ್ಕಿ ಮಾರುವ ಈಕೆ ಸಾಮಾನ್ಯ ಗೃಹಿಣಿಯಲ್ಲ. ಒಂದೂವರೆ ಸಾವಿರ ಮತದಾರರನ್ನೊಳಗೊಂಡ ಗ್ರಾಮ ಪಂಚಾಯತ್ ಸದಸ್ಯೆ!
ಹೌದು. ಈಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಳ್ಳಿ ಮೂಲದ ಲಕ್ಷ್ಮೀ ದೇವಮ್ಮ. ಮಂಡಕ್ಕಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಈ ಮಹಿಳೆ ಕೋಟಗಲ್ ಗ್ರಾಮ ಪಂಚಾಯತ್ನ ಬಿಜೆಪಿ ಬೆಂಬಲಿತ ಸದಸ್ಯೆ. ಮಂಡಕ್ಕಿ ಮಾರಾಟದ ಕಾರಣದಿಂದಾಗಿ ಕಳೆದ 17 ವರ್ಷಗಳಿಂದ ಬಿ.ಸಿ.ರೋಡ್ನಲ್ಲಿ ವಾಸ್ತವ್ಯವಿದ್ದಾರೆ. ಆದರೆ ಇವರ ವಾಸ್ತವ್ಯದ ದಾಖಲೆಗಳೆಲ್ಲಾ ಚಿಕ್ಕಬಳ್ಳಾಪುರದಲ್ಲೇ ಇದೆ.
ಇದೇ ಉದ್ಯೋಗ ನಿರ್ವಹಿಸುತ್ತಿರುವ ಲಕ್ಷ್ಮೀದೇವಮ್ಮ ಅವರ ತಂಗಿ, ಭಾವ ಹಾಗೂ ಗಂಡ ಹನುಮಂತಪ್ಪ ಅವರು ತಿಂಗಳಿಗೊಮ್ಮೆ ಅಥವಾ ಬೆಂಗಳೂರಿನಿಂದ ಪತ್ನಿಗೆ ಮಾರಾಟಕ್ಕಾಗಿ ಮಂಡಕ್ಕಿ ತಂದುಕೊಟ್ಟು ಹೋಗುತ್ತಾರೆ. ಇವರ ಸಂಬಂಧಿಕರು ಕೂಡ ಬಿ.ಸಿ.ರೋಡ್ ಸಮೀಪದ ತುಂಬೆ ಪರಿಸರದಲ್ಲಿ ವಾಸವಿದ್ದು, ಅವರು ಮಂಡಕ್ಕಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲಕ್ಷೀ ದೇವಮ್ಮ ದಂಪತಿಯ ಪುತ್ರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿ.
ಸಾಮಾನ್ಯ ಸಭೆಗೆ ಹಾಜರು
ಲಕ್ಷ್ಮೀದೇವಮ್ಮ ತಿಂಗಳಿಡೀ ಮಂಡಕ್ಕಿ ಮಾರಾಟದಲ್ಲಿ ತೊಡಗುತ್ತಾರೆ. ಆದರೆ ಗ್ರಾಮ ಪಂಚಾಯತ್ನಲ್ಲಿ ನಡೆಯುವ ತಿಂಗಳ ಸಾಮಾನ್ಯ ಸಭೆಗೆ ಮಾತ್ರ ತಪ್ಪದೆ ಹಾಜರಾಗುತ್ತಾರೆ. ಸಭೆಯಲ್ಲಿ ತನ್ನ ವಾರ್ಡ್ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರವನ್ನೂ ಕಂಡುಕೊಳ್ಳುತ್ತಿದ್ದಾರೆ.
ಕೊರಮಚಟ್ಟಿ ಸಮುದಾಯಕ್ಕೆ ಸೇರಿದ ಇವರು ಕೋಟಗಲ್ ಗ್ರಾ.ಪಂಗೆ ಪ.ಜಾತಿ ಕೋಟಾದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. 1500 ಮತಗಳನ್ನು ಪಡೆದು ಭರ್ಜರಿ ಗೆಲುವನ್ನು ಸಾಧಿಸಿದ್ದರು. ಇದೀಗ ಗ್ರಾ.ಪಂ.ಸದಸ್ಯೆಯಾಗಿ ಎರಡೂವರೆ ವರ್ಷವನ್ನು ಪೂರೈಸಿದರೂ, ತನ್ನ ಬದುಕಿನ ಜಟಕಾ ಬಂಡಿ ಸಾಗಿಸುವ ವೃತ್ತಿ ಮಂಡಕ್ಕಿ ಮಾರಾಟವನ್ನು ಮಾತ್ರ ನಿಲ್ಲಿಸಿಲ್ಲ.
ತನ್ನ ಮತದಾರರು ಅಗತ್ಯಕ್ಕಾಗಿ ಕರೆ ಮಾಡಿದರೆ, ಇವರ ಪತಿ ಹನುಮಂತಪ್ಪ ಅವರು ಮತದಾರನ ಸಮಸ್ಯೆಗೆ ಸ್ಪಂದಿಸುತ್ತಾರೆ. ಸಾಮಾನ್ಯ ಸಭೆಗೆ ಅಥವಾ ಅಗತ್ಯದ ಸಂದರ್ಭ ತನ್ನ ಊರಿಗೆ ತೆರಳಿದಾಗ ವಾರಗಳ ಕಾಲ ಇದ್ದು ತನ್ನ ಮತದಾರರ ಜೊತೆಗಿದ್ದು, ಅವರಿಗೆ ಪಂಚಾಯತ್ನಿಂದ ಆಗಬೇಕಾದ ಕೆಲಸ,ಕಾರ್ಯಗಳನ್ನು ಮಾಡಿಸಿಕೊಡುತ್ತೇನೆ. ತಾನು ವಾಪಾಸ್ ಬಿ.ಸಿ.ರೋಡ್ಗೆ ಬಂದ ಬಳಿಕ ಎಲ್ಲಾ ಕೆಲಸವನ್ನು ಗಂಡನೇ ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ ಲಕ್ಷ್ಮೀ ದೇವಮ್ಮ.
ಬಿ.ಸಿ.ರೋಡ್ನ ಕೇಂದ್ರಸ್ಥಾನದಲ್ಲಿ ವಾಸವಿರುವ ಲಕ್ಷ್ಮೀ ದೇವಮ್ಮ ಅವರು ಬೆಳಗ್ಗೆ 6 ಗಂಟೆಗೆ ತಲೆಮೇಲೆ ಮಂಡಕ್ಕಿ ಮೂಟೆ ಹೊತ್ತು ಹೊರಟರೆ ಸಂಜೆಯ ಹೊತ್ತಿಗೆ ಇಡೀ ಗೋಣಿಚೀಲ ಮುಗಿಸಿ ಮನೆಗೆ ವಾಪಾಸಾಗುತ್ತಾರೆ. ದ.ಕ. ಜಿಲ್ಲೆಯ ಪ್ರತಿ ತಾಲೂಕಿಗೂ ಇವರ ಮಂಡಕ್ಕಿ ಮಾರಾಟಕ್ಕೆ ತೆರಳುತ್ತಾರೆ. ಕೆಲವೊಮ್ಮೆ ಜಾತ್ರಾ ಸ್ಥಳದಲ್ಲು ಮಂಡಕ್ಕಿ ಮಾರಾಟದಲ್ಲಿ ನಿರತರಾಗಿರುತ್ತಾರೆ. ಪ್ರತಿ 15 ಅಥವಾ 20 ದಿನದ ಬಳಿಕ ವಾಪಾಸ್ ತಾಲೂಕುವಾರುಗೆ ಮಂಡೆಕ್ಕಿ ಮೂಟೆಯೊಂದಿಗೆ ಹೋಗುತ್ತಾರೆ. ಹಾಗಾಗಿ ಪ್ರತಿ ತಾಲೂಕಿನಲ್ಲು ಬಹುತೇಕರಿಗೆ ಲಕ್ಷ್ಮೀದೇವಮ್ಮ ಪರಿಚಯಸ್ಥರಾಗಿದ್ದಾರೆ.
ಊರಿನಲ್ಲಿ ಗಂಡನಿಗೆ ಒಂದಷ್ಟು ಕೃಷಿ ಭೂಮಿ ಇದೆಯಾದರೂ, ಅದರಲ್ಲಿ ಬೆಳೆ ಸಿಗುವುದು ಅಷ್ಟಕಷ್ಠೆ. ಮಳೆಯ ಸಂದರ್ಭ ಕೃಷಿ ಮಾಡಿದರೂ ನೆರೆಯಿಂದಾಗಿ ಬೆಳೆ ಉಳಿದರೆ ಪುಣ್ಯ. ತಮ್ಮ ಜೀವನ ಸಾಗಿಸುವುದಕ್ಕಾಗಿ ಮಂಡೆಕ್ಕಿ ಮಾರಾಟವನ್ನು ಕಾಯಕವನ್ನಾಗಿಸಿದ್ದೇವೆ.17 ವರ್ಷದಿಂದ ಬಿ.ಸಿ.ರೋಡ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಇಲ್ಲಿನ ಜನರು ಒಳ್ಳೆ ಸಹಕಾರ ನೀಡುತ್ತಿದ್ದಾರೆ ಎಂದು ಲಕ್ಷ್ಮೀ ದೇವಮ್ಮ ಹೇಳುತ್ತಾರೆ.