Karavali
ಕುಂದಾಪುರ: ಭಾರತವನ್ನು ಧರ್ಮ ರಾಜಕಾರಣದ ಪ್ರಯೋಗಶಾಲೆ ಮಾಡಿದ ಬಿಜೆಪಿ - ಬಿ.ಕೆ.ಹರಿಪ್ರಸಾದ್
- Thu, Feb 09 2023 10:19:54 AM
-
ಕುಂದಾಪುರ, ಫೆ 09( DaijiworldNews/MS): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆ ಮಾಡಿದ್ದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಪಕ್ಷದ ಮುಖಂಡರಿಗೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವ ನೈತಿಕತೆ ಎಲ್ಲಿದೆ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ದೇಶದಲ್ಲಿ ಆಡಳಿತ ನೀಡಿದ್ದರಿಂದಾಗಿ ಜನಸಾಮಾನ್ಯರಾದ ನರೇಂದ್ರ ಮೋದಿಯವರಿಗೂ ಈ ದೇಶದ ಪ್ರಧಾನ ಮಂತ್ರಿಯಾಗುವ ಭಾಗ್ಯ ಒಲಿದಿದೆ. ಪ್ರಧಾನಿ ಮೋದಿಯವರಿಗೆ ದೇಶದ ಕಾಳಜಿಗಿಂತ ಅವರ ಹಿಂಬಾಲಕರ ಕಾಳಜಿ ವಹಿಸುವುದೇ ಆದ್ಯತೆಯಾಗಿದೆ. 15 ಲಕ್ಷ ಬ್ಯಾಂಕ್ ಖಾತೆಗೆ ಬರುತ್ತದೆ ಎನ್ನುವ ಸುಳ್ಳು ಭರವಸೆಯೊಂದಿಗೆ ದೇಶದ ಜನರನ್ನು ಮರಳು ಮಾಡಿದ ಬಿಜೆಪಿಗರಿಗೆ ಭರವಸೆಗಳ ಮೇಲೆ ನಂಬಿಕೆ ಇಲ್ಲದೆ ಇರುವುದರಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಹೇಗೆ ಪೂರ್ಣಗೊಳಿಸಲಾಗುತ್ತೆ ಎನ್ನುವ ಅನುಮಾನ ಅವರನ್ನು ಕಾಡುತ್ತಿದೆ. ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ದಂಧೆಯನ್ನು ನಿಯಂತ್ರಣಕ್ಕೆ ತರುವ ಮೂಲಕವೇ ನಮ್ಮ ಭರವಸೆಗಳನ್ನು ಈಡೇರಿಸುವ ನಂಬಿಕೆ ಹಾಗೂ ಬದ್ಧತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರು.
ದೇಶಭಕ್ತಿ ಹಾಗೂ ರಾಷ್ಟ್ರಯತೆ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ಗೆ, ಸ್ವಾತಂತ್ರ್ಯ ಸಂಗ್ರಾಮವನ್ನೆ ವಿರೋಧಿಸಿದ ಹಿನ್ನೆಲೆ ಇರುವವರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅನೀವಾರ್ಯತೆ ಇಲ್ಲ. 7 ದೊಡ್ಡ ಧರ್ಮಗಳನ್ನು ಹೊಂದಿರುವ ಭಾವೈಕ್ಯತೆಯ ಸಂಗಮವಾಗಿರುವ ಭಾರತವನ್ನು ಧರ್ಮ ರಾಜಕಾರಣದ ಪ್ರಯೋಗಶಾಲೆಯನ್ನಾಗಿಸಿದ ಕೀರ್ತಿ ಬಿಜೆಪಿ ಗೆ ಸಲ್ಲಬೇಕು. ಯಾವುದೇ ರಾಜಕಾರಣಿಗಳ ಮಕ್ಕಳು ಧರ್ಮ ರಾಜಕಾರಣಕ್ಕಾಗಿ ಹಾಗೂ ಧರ್ಮ ಸಂಘರ್ಷಕ್ಕಾಗಿ ಬೀದಿಗಿಳಿದು ಪ್ರಾಣ ಚಲ್ಲುವುದಿಲ್ಲ. ಜೈಲೂ ಸೇರುವುದಿಲ್ಲ. ಬಡ ಮಕ್ಕಳನ್ನು ಈ ಕಾರ್ಯಕ್ಕೆ ಪ್ರಚೋದಿಸುವ ನಾಯಕರು ತಮ್ಮ ತಮ್ಮ ಮಕ್ಕಳನ್ನು ಈ ಕಾರ್ಯಕ್ಕೆ ಕಳುಹಿಸುವ ಧೈರ್ಯ ತೋರಬೇಕು. ಅಭಿವೃದ್ಧಿಯ ರಾಜಕಾರಣದ ಪಾಠ ಹೇಳದೆ, ಲವ್ ಜಿಹಾದ್ನಂತಹ ಧರ್ಮ ರಾಜಕಾರಣದ ಪಾಠವನ್ನು ಬೋಧಿಸುವ ಬಿಜೆಪಿ ಪಕ್ಷದ ಅಧ್ಯಕ್ಷರ ಪಕ್ಷದ ಆಡಳಿತ ಬೇಕಾ ? ಅಥವಾ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವ ರಾಷ್ಟ್ರಭಕ್ತ ಕಾಂಗ್ರೆಸ್ ಸರ್ಕಾರ ಬೇಕಾ ಎನ್ನುವುದನ್ನು ಮತದಾರರು ಈ ಬಾರಿ ತೀರ್ಮಾನಿಸಬೇಕಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಂದಾಪುರ-ಗಂಗೊಳ್ಳಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಎರಡು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಂದು ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ಕೇಂದ್ರಿಕರಿಸಿಕೊಂಡು ಹಾಗೂ ಇನ್ನೊಂದು ಆಯಾ ಭೌಗೋಳಿಕ ಪ್ರದೇಶಗಳ ವ್ಯಾಪ್ತಿಯನ್ನು ಕೇಂದ್ರಿಕರಿಸಿಕೊಂಡು ಮಾಡಲಾಗಿದೆ. ಗ್ರಹ ಜ್ಯೋತಿ, ಗ್ರಹ ಲಕ್ಷ್ಮೀ ಯೋಜನೆಗಳ ಜೊತೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ 2,500 ಕೋಟಿ ವಾರ್ಷಿಕ ಅನುದಾನದಲ್ಲಿ ಕರಾವಳಿ ಪ್ರದೇಶಾಭಿವೃದ್ದಿ, ಮಂಗಳೂರಿನಲ್ಲಿ ಐಟಿ ಪಾರ್ಕ್, ಮೀನುಗಾರರಿಗೆ 10 ಲಕ್ಷ ವಿಮಾ ಯೋಜನೆ, ಮೀನುಗಾರರ ಅಭಿವೃದ್ಧಿಗೆ ಕಾರ್ಯಕ್ರಮಗಳು, ವಾರ್ಷಿಕ 250 ಕೋಟಿ ರೂ. ಅನುದಾನದಲ್ಲಿ ಬಿಲ್ಲವ ಹಾಗೂ ಬಂಟ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ನೀಡಲಾದ ಪಡಿತರ ಚೀಟಿಗಳನ್ನು ರದ್ದು ಮಾಡಿ, ಇದೀಗ ನಾವು ಸರಿ ಮಾಡಿ ಕೊಡುತ್ತೇವೆ ಎಂದು ನಂಬಿಸುವ ಪ್ರಯತ್ನ ಆಡಳಿತ ಪಕ್ಷದವರಿಂದ ನಡೆಯುತ್ತಿದೆ. ನೆರೆಯ ಕೇರಳ ರಾಜ್ಯದಲ್ಲಿ ನೀಡುವಂತೆ ಕರ್ನಾಟಕ ನಾಡಾ ದೋಣಿ ಮೀನುಗಾರರರಿಗೂ ತಲಾ ೩೦೦ ಲೀಟರ್ ಸಬ್ಸಿಡಿ ಸೀಮೆಎಣ್ಣೆ ನೀಡುವ ಸಿದ್ಧರಾಮಯ್ಯ ಅವರ ನೇತ್ರತ್ವದ ಸರ್ಕಾರದ ತೀರ್ಮಾನವನ್ನು ಗಾಳಿಗೆ ತೂರಲಾಗಿದೆ. ಕೇವಲ ರಾಜಕೀಯದ ಕಾರಣಕ್ಕಾಗಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎನ್ನುವ ಬಿಜೆಪಿ ಪಕ್ಷದವರಿಗೆ ಮೀನುಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇಲ್ಲ. ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಅವರ ಸಾವನ್ನು, ಸುಳ್ಳು ಹೇಳಿ ರಾಜಕೀಯ ಲಾಭ ಮಾಡಿಕೊಂಡಿದ್ದ ಬಿಜೆಪಿಗರು ಇದೀಗ ಸಿಬಿಐ ವರದಿ ಬಂದ ಬಳಿಕ ತುಟಿ ಬಿಚ್ಚುತ್ತಿಲ್ಲ. ಕೇವಲ ಸುಳ್ಳು ಹಾಗೂ ಅಪಪ್ರಚಾರದಿಂದ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಗೆಯಲ್ಲಿ ಪಳಗಿರುವ ಬಿಜೆಪಿಗರಿಗೆ ಚುನಾವಣೆ ಮುಗಿದ ಬಳಿಕ ತಮ್ಮ ಮಾತುಗಳೇ ಮರೆತು ಹೋಗುತ್ತದೆ. ಬೈಂದೂರಿನಲ್ಲಿ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐದು ಹೊಳೆಗಳ ಸೇರ್ಪಡೆ ಯೋಜನೆಗಳು ಏನಾಯಿತು ಎಂದು ಪ್ರಶ್ನಿಸಿದ ಅವರು ವಿಮಾನ ನಿಲ್ದಾಣ ಮಾರಾಟ ಮಾಡುವವರು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾದರು ಹೇಗೆ ಎಂದು ವ್ಯಂಗ್ಯವಾಡಿದರು.
ಎಐಸಿಸಿ ಕಾರ್ಯದರ್ಶಿ ರೋಝಿ ಜೋನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರಾದ ದಿನೇಶ್ ಪುತ್ರನ್, ಅಲೆವೂರು ಹರೀಶ್ ಕಿಣಿ, ಕೆ.ವಿಕಾಸ್ ಹೆಗ್ಡೆ, ರಾಜು ಎಸ್ ಪೂಜಾರಿ, ದೇವಕಿ ಪಿ ಸಣ್ಣಯ್ಯ, ಪ್ರಸನ್ನಕುಮಾರ ಕೆರಾಡಿ, ಪಕ್ಷದ ಪ್ರಮುಖರಾದ ಕೊಳ್ಕೆಬೈಲು ಕಿಶನ್ಕುಮಾರ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬೀಜಾಡಿ ಅಶೋಕ ಪೂಜಾರಿ, ಶ್ಯಾಮಲಾ ಭಂಡಾರಿ, ಸುರೇಂದ್ರ ಶೆಟ್ಟಿ, ಬಿ.ಹೆರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ದೇವಾನಂದ ಶೆಟ್ಟಿ ಬಸ್ರೂರು, ಮದನಕುಮಾರ ಉಪ್ಪುಂದ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಶಂಕರ ಕುಂದರ್ ಕೋಟ, ರೋಶನ್ಕುಮಾರ ಶೆಟ್ಟಿ, ಸೌರಭ್ ಬಲ್ಲಾಳ್, ಇಚ್ಚಿತಾರ್ಥ ಶೆಟ್ಟಿ, ಶೇಖರ ಪೂಜಾರಿ ಬೈಂದೂರು, ಮುನಾಫ್ ಕೋಡಿ, ಎನ್ಎಸ್ಯುಐ ಮುಖಂಡ ಸುಜನ್ ಶೆಟ್ಟಿ ಇದ್ದರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.