ಮೂಡುಬಿದಿರೆ, ಫೆ 08 (DaijiworldNews/DB): 2020ರ ಫೆಬ್ರವರಿ ತಿಂಗಳಿನಲ್ಲಿ ಮೂಡುಬಿದಿರೆಯ ದರೆಗುಡ್ಡೆ ಸಮೀಪದ ಕೆಲಪುತ್ತಿಗೆ ಎಂಬಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಖಲಾಸೆಗೊಳಿಸಿ ನಿರಪರಾಧಿಗಳು ಎಂದು ತೀರ್ಪು ನೀಡಿದೆ.
2020ರ ಫೆಬ್ರವರಿ 23ರಂದು ರಾತ್ರಿ ರವೀಂದ್ರ ಎಂಬವರು ಮದ್ಯ ಸೇವಿಸಿಕೊಂಡು ಬಂದು ಮನೆಯಲ್ಲಿ ನೃತ್ಯ ಮಾಡುತ್ತಿದ್ದು, ಈ ವೇಳೆ ಆರೋಪಿ ಆನಂದ ರವೀಂದ್ರರ ಕೆನ್ನೆಗೆ ಹಲ್ಲೆ ನಡೆಸಿದ್ದ. ಇನ್ನೊಬ್ಬ ಆರೋಪಿ ಶ್ರೀನಿವಾಸ ಅವರು ತಲೆ ಮತ್ತು ಇತರ ದೇಹದ ಇತರ ಭಾಗಗಳಿಗೆ ಗಂಭೀರ ಹಲ್ಲೆ ನಡೆಸಿದ ಪರಿಣಾಮ ರವೀಂದ್ರರು ಮೃತಪಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ಮೂಡುಬಿದಿರೆ ಪೋಲಿಸರು ಪ್ರಕರಣ ದಾಖಲಿಸಿ ಆರೋಪಿಗಳಾದ ಶ್ರೀನಿವಾಸ ಮತ್ತು ಆನಂದರ ವಿರುದ್ಧ ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಿ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ವೇಳೆ 28 ಮಂದಿ ಸಾಕ್ಷಿ ನುಡಿದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪ ದೃಢ ಪಟ್ಟಿಲ್ಲ ಎಂದು ಪ್ರಕರಣವನ್ನು ವಜಾಗೊಳಿಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಗಳ ಪರವಾಗಿ ಮಂಗಳೂರಿನ ನ್ಯಾಯಾವಾದಿ ಬಿ. ಝಾಕೀರ್ ಹುಸೇನ್ ಮತ್ತು ಮೂಡುಬಿದಿರೆ ವಕೀಲ ಆನಂದ ಕೆ. ಶಾಂತಿನಗರ ವಾದಿಸಿದ್ದರು.