ಮಂಗಳೂರು,ಮಾ 14 (MSP): ಎಸ್ ಸಿಡಿಸಿಸಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನೀಡಿದ್ರೆ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು ಖಚಿತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಮಾ.೧೪ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜೇಂದ್ರ ಕುಮಾರ್ ಒಬ್ಬ ಭ್ರಷ್ಟಾಚಾರಿಯಾಗಿದ್ದು, ಅವರು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿಲ್ಲ. ಅವರು ಹಣಬಲದ ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ರಾಜೇಂದ್ರಕುಮಾರ್ ಹಾಗೂ ಐವನ್ ಡಿ ಸೋಜಾ ಟಿಕೆಟ್ ನೀಡಿದರೆ ನನ್ನ ಬಲವಾದ ವಿರೋಧವಿದೆ ಎಂದು ತಿಳಿಸಿದರು.
ಮಾಜಿ ಸಚಿವ ರಮಾನಾಥ್ ರೈ, ಮಾಜಿ ಶಾಸಕ ವಿನಯಕುಮಾರ ಸೊರಕೆ, ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಅಥವಾ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗೆ ಟಿಕೆಟ್ ನೀಡಿದರೆ ನನ್ನ ಬೆಂಬಲವಿದೆ. ಇದನ್ನು ಬಿಟ್ಟು ಒಂದು ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಅಥವಾ ರಾಜೇಂದ್ರ ಕುಮಾರ್ ಸ್ಪರ್ಧೆ ಮಾಡಿದರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ರಾಜೇಂದ್ರ ಕುಮಾರ್ ಅವರು ಒಬ್ಬ ಭ್ರಷ್ಟಾಚಾರಿಯಾಗಿದ್ದು ಅವರ ವಿರುದ್ದ ಭ್ರಷ್ಟಾಚಾರದ ಆರೋಪಗಳು ಮಾಧ್ಯಮಗಳಲ್ಲಿ ಬಂದಿದೆ ಎಂದು ರಾಜೇಂದ್ರ ಕುಮಾರ್ ಮೇಲೆ ವಾಗ್ದಾಳಿ ನಡೆಸಿದರು.
ನಾನು ಕೂಡಾ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿ, ನಾನು ಇನ್ನೆರಡು ದಿನದಲ್ಲಿ ದೆಹಲಿಗೆ ತೆರಳುತ್ತೇನೆ. ಅಲ್ಲಿ ಪಕ್ಷದ ವರಿಷ್ಟ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಒಂದು ವೇಳೆ ಕಾಂಗ್ರೆಸ್ ರಾಜೇಂದ್ರ ಕುಮಾರ್ ಗೆ ಲೋಕಸಭಾ ಟಿಕೆಟ್ ನೀಡಿದರೆ ನಾನು ಬಂಡಾಯ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.