ಕುಂದಾಪುರ, ಫೆ 08 (DaijiworldNews/DB): ಕುಂದಾಪುರ ನಗರ ಠಾಣೆಯ ಕಾನ್ಸ್ಟೇಬಲ್ವೊಬ್ಬರು ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್ ಬಳಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಘಟನೆಗೆ ಅನಾರೋಗ್ಯ ಅಥವಾ ಆನ್ಲೈನ್ ಬೆಟ್ಟಿಂಗ್ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟ ಕಾರಣ ಎಂಬ ಶಂಕೆ ಮೂಡಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಮದ ನಾಗೇಶ ಗೌಡ ಅವರ ಪುತ್ರ ರಾಮ ಗೌಡ (32) ಆತ್ಮಹತ್ಯೆಗೆ ಶರಣಾದವರು. ಕಳೆದ 5 ವರ್ಷಗಳಿಂದ ಕುಂದಾಪುರ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿದ್ದರು. ಮಂಗಳವಾರ ಘಟನೆ ಬೆಳಕಿಗೆ ಬಂದಿದೆ.
ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ತಿಳಿಸದೆ ಫೆಬ್ರವರಿ 2ರಿಂದಲೇ ರಾಮ ಗೌಡ ಅವರು ಕೆಲಸಕ್ಕೆ ಗೈರು ಹಾಜರಾಗಿದ್ದರು. ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಮಂಗಳವಾರ ಬೆಳಗ್ಗೆ ಕಾಸರಗೋಡಿನ ಇಕೋ ಬೀಚ್ ಸನಿಹದಲ್ಲಿರುವ ಪಾರ್ಕ್ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇನ್ನು ಮೃತದೇಹದ ಬಳಿ ಬ್ಯಾಗ್ ಕೂಡಾ ಪತ್ತೆಯಾಗಿದೆ. ಸ್ಥಳಕ್ಕೆ ಕುಂದಾಪುರ ಎಸ್ಐ ಈರಯ್ಯ ಹಾಗೂ ಸಿಬಂದಿ ಭೇಟಿದ್ದು, ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಯ್ಯ ಗೌಡ ಅವರು ಉತ್ತಮ ವಾಲಿಬಾಲ್ ಪಟುವಾಗಿದ್ದರು. ಕೆಲ ದಿನಗಳಿಂದ ಏಕಾಂಗಿಯಾಗಿರುತ್ತಿದ್ದ ಅವರಿಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿತ್ತು ಎನ್ನಲಾಗುತ್ತಿದೆ. ಇದಲ್ಲದೆ ಆನ್ಲೈನ್ ಬೆಟ್ಟಿಂಗ್ಗಾಗಿ ಬ್ಯಾಂಕ್ಗಳಲ್ಲಿ ಸಾಲ ಮಾಡಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ರಾಮ ಬರೆದಿದ್ದಾರೆನ್ನಲಾದ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂಗಿಯ ಮದುವೆ ಮಾಡಿಸಲು ನನ್ನಿಂದ ಸಾಧ್ಯವಾಗದ ಕಾರಣ ಆಕೆಗೆ ಸರ್ಕಾರಿ ಉದ್ಯೋಗ ನೀಡಿ ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ.