ಕಾಸರಗೋಡು, ಫೆ 08 (DaijiworldNews/HR): ಕರ್ನಾಟಕ ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಕಾಸರಗೋಡು ಕನ್ನಡಿಗರ ಸಮಸ್ಯೆಗಳ ಕಡೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನಸೆಳೆದರು.
ಡಾ.ಸಿ.ಸೋಮಶೇಖರ್ ಅವರು ಮಂಗಳವಾರ ತಿರುವನಂತಪುರದಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಕುರಿತು ವಿಶೇಷವಾಗಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಹೆಸರುಗಳ ಸ್ಥಳ ನಾಮಗಳನ್ನು ಮಲಯಾಳ ಭಾಷೆಗೆ ಬದಲಾಯಿಸಿರುವುದನ್ನು ತಡೆಹಿಡಿಯುವಂತೆ ಮನವಿ ಮಾಡಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ ವನ್ನು ನಿರ್ಮಾಣ ಮಾಡಲು ಕರ್ನಾಟಕದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ಒದಗಿಸಿದ್ದು ಈ ಯೋಜನೆಗೆ ಕೇರಳ ಸರ್ಕಾರ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಕಳೆದ ಬಜೆಟ್ನಲ್ಲಿ ಕೇರಳ ಸರಕಾರ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಾರಂಭಿಸುವ ಘೋಷಣೆ ಮಾಡಿದ್ದ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ನಮ್ಮ ಮನವಿಯನ್ನು ಸ್ವೀಕರಿಸಿದ ಕೇರಳ ಮುಖ್ಯ ಮಂತ್ರಿಗಳು ನಾವು ಸಲ್ಲಿಸಿದ ಕಾಸರಗೋಡು ಕನ್ನಡಿಗರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಹಾಗೂ ಕರ್ನಾಟಕ ಹಾಗೂ ಕೇರಳದ ಮಧ್ಯೆ ಉತ್ತಮ ಬಾಂಧವ್ಯ ಹಾಗೂ ಸಾಮರಸ್ಯವಿರುವುದಾಗಿ ಡಾ.ಸಿ.ಸೋಮಶೇಖರ್ ಹೇಳಿದರು.
ಮಂಜೇಶ್ವರದ ಶಾಸಕ ಅಶ್ರಫ್ ಅವರ ಸಹಕಾರದೊಂದಿಗೆ ಮುಖ್ಯಮಂತ್ರಿ ಬೇಟಿ ಸಾಧ್ಯವಾಯಿತು ಎಂದು ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ತಿಳಿಸಿದ್ದಾರೆ.
ಭೇಟಿ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ಜೊತೆಗಿದ್ದರು.