ಕೋಟ, ಫೆ 07 ( DaijiworldNews/SM): ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ವಿಫಲತೆ ಹಾಗೂ ಕಾಂಗ್ರೆಸ್ ಸದಸ್ಯರ ವಿರುದ್ಧ ದ್ವೇಷ ಧೋರಣೆ, ವಾರ್ಡ್ನ ಅಭಿವೃದ್ದಿಗೆ ನಿರಂತರ ಹಸ್ತಕ್ಷೇಪ ಮಾಡುವುದರಿಂದ ನೊಂದು ಪಟ್ಟಣ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದೆ. ಇವತ್ತು ದ್ವೇಷ ರಾಜಕಾರಣ ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಆಗುತ್ತಿದ್ದು ನನ್ನ ವಾರ್ಡ್ನ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ನನ್ನ ವಾರ್ಡ್ನ್ನು ಕಡೆಗಣಿಸಲಾಗುತ್ತಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರವೀಂದ್ರ ಕಾಮತ್ ಹೇಳಿದರು.
ಅವರು ಕೋಟ ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ಸಂಜೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ನಾನು 13ನೇ ವಾರ್ಡನ್ನು ಪ್ರತಿನಿಧಿಸುತ್ತಿದ್ದೇನೆ. ನಗರೋತ್ಥಾನ ಯೋಜನೆಯಡಿ ಸಾಲಿಗ್ರಾಮ ಪ.ಪಂ.ಗೆ ರೂ.15 ಕೋಟಿ ಅನುದಾನ ಬಂದಿದೆ. ನನ್ನ ವಾರ್ಡ್ 15 ಲಕ್ಷ ಅನುದಾನ ದೊರಕಿದೆ. 363 ಮೀಟರ್ ರಸ್ತೆ ಅಭಿವೃದ್ಧಿಗೆ ರಸ್ತೆಯನ್ನು ಅಗೆದು ಎರಡು ತಿಂಗಳಾದರೂ ಕಾಂಕ್ರೇಟಿರಣ ಆರಂಭಿಸಿಲ್ಲ. ಜನ ನನ್ನನ್ನು ಈ ಬಗ್ಗೆ ಕೇಳುತ್ತಿದ್ದಾರೆ. ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೇಸರವಾಗುತ್ತಿದೆ. ಪ್ರತಿಯೊಂದು ವಿಚಾರದಲ್ಲಿಯೂ ನನ್ನ ವಾರ್ಡನ್ನು ಕಡೆಗಣಿಸಲಾಗುತ್ತಿದೆ ಎಂದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿ, ಪ್ರತಿಪಕ್ಷ ಸದಸ್ಯರಿಗೆ ಅಧ್ಯಕ್ಷರು ಕಿರುಕುಳ ನೀಡಲಾಗುತ್ತಿದೆ. ಜನಪ್ರತಿನಿಧಿಗಳಿಗೆ ತನ್ನ ಹಕ್ಕು ಕರ್ತವ್ಯಗಳಿಗೆ ಅಡ್ಡಿ ಉಂಟು ಮಾಡುವಿಕೆ ಈ ಹೀಗೆ ಮುಂದುವರಿದರೆ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎದುರು ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನೆಡೆಸಲಿದ್ದೇವೆ.
ಸ್ಥಾನಿಯ ಸಮಿತಿ ಅಧ್ಯಕ್ಷರು ಮಾತನಾಡಿ ಬಿಜೆಪಿ ಕಳೆದ 13 ವರ್ಷಗಳಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಅಧಿಕಾರದಲ್ಲಿದೆ. ಇದು ಸಾಲಿಗ್ರಾಮದ ಅಭಿವೃದ್ದಿಗೆ ನೀಡಿದ ಕೊಡುಗೆ ಶೂನ್ಯ. ಘನತ್ಯಾಜ್ಯ ವಿಲೇವಾರಿಯಲ್ಲಿ ಒಂದೊಂದು ಗ್ರಾಮ ಪಂಚಾಯಿತಿಗಳು ಮಾಡಿದ ಸಾಧನೆ ಸಾಲಿಗ್ರಾಮ ಪಟ್ಟಣ ಪಂಚಾಯತ್ನಿಂದ ಮಾಡಲು ಆಗಲಿಲ್ಲ. ಘನತ್ಯಾಜ್ಯ ವಿಲೇವಾರಿಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ, ಪುನೀತ್ ಪೂಜಾರಿ, ದಿನೇಶ, ಗಣೇಶ್ ಕೆ ಉಪಸ್ಥಿತರಿದ್ದರು.