ಉಡುಪಿ,ಮಾ 14 (MSP): ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗಬೇಕು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಹೆಗ್ಡೆ ಬೆಂಬಲಿಗರು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಮಾ.14 ರ ಗುರುವಾರ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ನೀಡಿದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಅನುಕೂಲವಾಗುತ್ತದೆ. ಹೀಗಾಗಿಜನರ ಜೊತೆಯಿರುವ ನಾಯಕ ಜಯಪ್ರಕಾಶ್ ಹೆಗ್ಡೆಗೆ ಬಿಜೆಪಿ ಟಿಕೆಟ್ ಸಿಗುವಂತಾಗಬೇಕು ಎಂದು ಉಡುಪಿ ಕೃಷ್ಣಮಠದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಸಂಭವನೀಯ ಅಭ್ಯರ್ಥಿಯಾಗಿರುವುದರಿಂದ ಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು, ಹಾಲಿ ಸಂಸದೆಯ ವಿರುದ್ಧ ಆಕ್ರೋಶಗೊಂಡಿರುವ ಬಿಜೆಪಿಯ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. ಜನರ ಜೊತೆಯಿರುವ ನಾಯಕ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಸಿಗಬೇಕು ಎಂದು ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.