ಮಂಗಳೂರು, ಫೆ 07 ( DaijiworldNews/SM): ಸಿಟಿ ಕಾಲೇಜು ಹಾಸ್ಟೆಲ್ ನಲ್ಲಿ ಕಲುಷಿತ ಆಹಾರ ವಿತರಣೆಯಿಂದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ಸಂಘ ತೀವ್ರ ಖಂಡಿಸಿದೆ. ಈ ನಡುವೆ ಆಸ್ಪತ್ರೆಗೆ ಭೇಟಿ ನೀಡಿದ ನಿಯೋಗ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಮಂಗಳೂರು ನಗರದ ಸಿಟಿ ಹಾಸ್ಪಿಟಲ್ ಅಧೀನದಲ್ಲಿರುವ ಖಾಸಗಿ ಕಾಲೇಜು ಸಿಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ತಂಡವು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿತು, ಇದೇ ವೇಳೆ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು, ನಿಯೋಗದಲ್ಲಿ ಕರ್ನಾಟಕ ರಾಜ್ಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ವಿಕ್ಯಾತ್ ಉಳ್ಳಾಲ್, ಜಿಲ್ಲಾ ಉಸ್ತುವಾರಿ ನೂರ್ ಮುಹಮ್ಮದ್, ಉಪಾಧ್ಯಕ್ಷ ಅಂಕುಶ್ ಶರ್ಮಾ,ಪ್ರಧಾನ ಕಾರ್ಯದರ್ಶಿ ರಾಹೀಲ್, ಸಂಘಟನಾ ಕಾರ್ಯದರ್ಶಿ ಶಿರಾನ್ ಹಾಗೂ ಕಾರ್ಯದರ್ಶಿ ಅಬ್ದುಲ್ ಸಮದ್ ಉಪಸ್ಥಿತರಿದ್ದರು.
ಕಳೆದ ಎರಡು ದಿನಗಳಿಂದ ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಸಮಸ್ಯೆ ಕಾಡಿದೆ, ಇದಕ್ಕೂ ಮೊದಲು ಈ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಸರಿಯಾದ ಪರಿಶುದ್ಧ ಆಹಾರ ಪೂರೈಸುವುದಿಲ್ಲ ಎಂದು ಅನೇಕ ದೂರುಗಳು ಕೇಳಿಬಂದಿದ್ದು, ಇದ್ಯಾವುದನ್ನು ಲೆಕ್ಕಿಸದೇ ಕಾಲೇಜು ಆಡಳಿತ ಮಂಡಳಿಯು ಇದರ ಬಗ್ಗೆ ನಿರ್ಲಕ್ಷ್ಯಿಸಿತ್ತು. ಉನ್ನತ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಕ್ಯಾಟರಿಂಗ್ ನವರು ಸರಿಯಾಗಿ ಪರಿಶುದ್ಧ ಆಹಾರ ವಿತರಿಸದೇ ಕಲುಷಿತ ಆಹಾರ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ, ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ವಿವಿಧ ಬೇಡಿಕೆಯನ್ನಿಟ್ಟಿದ್ದು, ಅವುಗಳನ್ನು ಶೀಘ್ರವೇ ಪರಿಶೀಲಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.