ಕಾಪು, ಫೆ 07 (DaijiworldNews/HR): ಪಾಂಗಾಳದ ಬಳಿ ಭಾನುವಾರ ನಡೆದ ಶರತ್ ಶೆಟ್ಟಿ(38) ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಂತಕರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಂದು ಬೈಕ್ ನಲ್ಲಿ ಮೂವರು ಸಂಚರಿಸಿದ್ದು, ಹಂತಕರು ಕೈಯಲ್ಲಿ ಎರಡು ಕತ್ತಿ ಹಿಡಿದುಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೋಲದಲ್ಲಿ ಇದ್ದ ಶರತ್ ಶೆಟ್ಟಿಯನ್ನು ಹೊರಗೆ ಕರೆಸಿ ಕೊಲೆ ಮಾಡಲಾಗಿತ್ತು.
ಈಗಾಗಲೇ ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್ಪಿ ಅರವಿಂದ್ ಕುಲಗುಜ್ಜಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ಒಂದು ತಂಡ ಆರೋಪಿಗಳ ಸುಳುವಿನ ಆಧಾರದಲ್ಲಿ ಮಂಗಳೂರಿಗೆ ತೆರಳಿದೆ ಎನ್ನಲಾಗಿದೆ
ಒಂದು ತಂಡ ಮೃತ ಶರತ್ ಶೆಟ್ಟಿ ಮೊಬೈಲ್ ಹಾಗೂ ಸಿಸಿಟಿವಿ ವಿಡಿಯೋ ಆಧಾರದಲ್ಲಿ ಉಡುಪಿಯಲ್ಲಿ ಮಾಹಿತಿ ಕಲೆಹಾಕುತ್ತಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸಿಕೊಂಡಿರುವುದರಿಂದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದೆರಡು ದಿನದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲಾಗುವುದು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.