ಮಂಗಳೂರು, ಫೆ 06 (DaijiworldNews/SM): ಕರಾವಳಿಯಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಜನ ದೈವಾರಾಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಹಾಗಾಗಿ ಇಂದಿಗೂ ತುಳುನಾಡಿನಲ್ಲಿ ಹೆಚ್ಚು ದೈವಗಳನ್ನು ಆರಾಧಿಸಲಾಗುತ್ತದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಅಪರೂಪವಾದ ನವಗುಳಿಗ ದೈವಗಳಿಗೆ ಗಗ್ಗರ ಸೇವೆಯೊಂದು ನಡೆದಿದೆ.ತುಳುನಾಡಿನ ಮಣ್ಣಿನಲ್ಲಿ ನವಗುಳಿಗ ನೆಲೆಯಾದ ಏಕೈಕ ಸ್ಥಳ ಇದಾಗಿದೆ.
ಕರಾವಳಿ ಭಾಗದಲ್ಲಿ ಗುಳಿಗ ದೈವದ ಆರಾಧನೆಗೆ ವಿಶೇಷ ಆಕರ್ಷಣೆ ಇದೆ. ಗುಳಿಗ ದೈವದ ರೋಷಾವೇಷ ನೋಡೋದೇ ಒಂದು ರೋಮಾಂಚಕ ಅನುಭವ. ಸಾಮಾನ್ಯವಾಗಿ ಒಂದು ಗುಳಿಗ ದೈವಕ್ಕೆ ಆರಾಧನೆ ನಡೆಯುವುದು ಮಾಮೂಲಿ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟೆಡೆ ಗ್ರಾಮದ ಬರ್ಕಜೆಯಲ್ಲಿರುವ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ ನವ ಗುಳಿಗ ದೈವ ನೆಲೆಯೂರಿದೆ. ಒಂದೇ ದಿನ ಒಂದೇ ಬಾರಿ ಈ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯುತ್ತದೆ. ಈ ಬಾರಿಯ 8ನೇ ವರ್ಷದ ವಾರ್ಷಿಕ ಉತ್ಸವವೂ ಅತ್ಯಂತ ಯಶಸ್ವಿಯಾಗಿ ನಡೆಯಿತು. ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ಗಗ್ಗರ ಸೇವೆ ಜರಗಿತು. ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ದುರ್ಗಾಪರಮೇಶ್ವರಿಯ ಸನ್ನಿದಿಯ ಮುಂಭಾಗದಲ್ಲೇ ಈ ನವ ಗುಳಿಗನ ಸಾನಿಧ್ಯ ಇದ್ದು, ಈ ಹಿಂದೆ ಒಂದು ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಯುತ್ತಿತ್ತು. ಆದ್ರೆ ಪ್ರಶ್ನಾ ಚಿಂತನೆಯಲ್ಲಿ ನವಗುಳಿಗ ದೈವ ಇಲ್ಲಿ ನೆಲೆಯೂರಿದೆ ಎಂದು ತಿಳಿದುಬಂದಿತ್ತು. ಹೀಗಾಗಿ ಕಳೆದ 4 ವರ್ಷಗಳಿಂದ ನವಗುಳಿಗ ದೈವಗಳಿಗೆ ಜಾತ್ರ ಮಹೋತ್ಸವದ ನಿಮಿತ್ತ ಗಗ್ಗರ ಸೇವೆ ನಡೆಯುತ್ತವೆ.
ಈ ನವ ಗುಳಿಗ ದೈವಗಳೇ ಕ್ಷೇತ್ರದ ರಕ್ಷಣೆಯನ್ನು ಮಾಡುತ್ತಿದ್ದು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು ಸಹ ದೂರ ಮಾಡುತ್ತಿದೆ. ಕೇವಲ ಜಿಲ್ಲೆ ಮಾತ್ರವಲ್ಲದೇ ಹೊರೆ ಜಿಲ್ಲೆಯ ಭಕ್ತರು ಸಹ ಇಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡು ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಾರೆ.