ಉಳ್ಳಾಲ, ಫೆ 06 (DaijiworldNews/HR): ಅವೈಜ್ಞಾನಿಕವಾದ ಸರ್ವಿಸ್ ರಸ್ತೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಲಪಾಡಿ ಗ್ರಾಮದ ಕೆ.ಸಿ ರೋಡ್ ಹರಿಜನ ಕಾಲನಿ ನಿವಾಸಿಗಳು ರಸ್ತೆಯಲ್ಲೇ ಕುಳಿತು ಡಾಮಾರು ಹಾಕಲು ಬಂದ ವಾಹನವನ್ನು ತಡೆಗಟ್ಟಿ ಹಿಂದಕ್ಕೆ ಕಳುಹಿಸಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ರಾ.ಹೆ 66 ರ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಸಂಸ್ಥೆ ಇತ್ತೀಚೆಗೆ ತಲಪಾಡಿಯ ಕೆ.ಸಿ ರೋಡ್ ಹರಿಜನ ಕಾಲನಿ ಸಂಪರ್ಕಿಸುವ ರಸ್ತೆಯ ಎದುರುಭಾಗದಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿತ್ತು. ಇದರಿಂದ ಸರ್ವಿಸ್ ರಸ್ತೆ ಹಾಗೂ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ 15 ಅಡಿ ಎತ್ತರ ವ್ಯತ್ಯಾಸವಿದೆ. ಅವೈಜ್ಞಾನಿಕ ತಿರುವು ಹಾಗೂ ಎತ್ತರದ ರಸ್ತೆಯಿಂದ ನೀರಿನ ಟ್ಯಾಂಕರ್ ಸೇರಿದಂತೆ ವಾಹನಗಳು ತೆರಳಲು ಅಸಾಧ್ಯವಾಗಿದೆ. ಅವೈಜ್ಞಾನಿಕ ರಸ್ತೆಯ ವಿರುದ್ಧ ಗುತ್ತಿಗೆದಾರ ಸಂಸ್ಥೆಗೆ ಗ್ರಾಮಸ್ಥರು ಮನವಿ ಮಾಡಿದರೂ, ರಸ್ತೆ ಸುಸ್ಥಿತಿಗೆ ತರಲು ಸ್ಪಂಧಿಸಲೇ ಇಲ್ಲ. ಅಲ್ಲದೆ ಜ.4 ರಂದು ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆಗೆ ಡಾಮರೀಕರಣ ನಡೆಸಲು ಟಿಪ್ಪರ್ ವಾಹನ ಹಾಗೂ ಕಾರ್ಮಿಕರು ಬಂದಿದ್ದರು. ಇದರಿಂದ ಕೆರಳಿದ ಗ್ರಾಮದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಸರ್ವಿಸ್ ರಸ್ತೆಯನ್ನು ಸುಸ್ಥಿತಿಗೆ ತರದೇ ಡಾಮರೀಕರಣಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಸ್ತೆಯಲ್ಲೇ ಕುಳಿತ ಮಹಿಳೆಯರು 15 ನಿಮಿಷಗಳ ಕಾಲ ಪ್ರತಿಭಟನೆಯನ್ನು ನಡೆಸಿದರು.
ಹಿಂದೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಗ್ರಾಮದ ರಸ್ತೆಗೆ ಅಡಚಣೆಯಾಗಿತ್ತು. ಇದೀಗ ಸರ್ವಿಸ್ ರಸ್ತೆಯಿಂದಾಗಿ ಉಂಟಾಗುತ್ತಿದೆ. ಸರ್ವಿಸ್ ರಸ್ತೆ ನಿರ್ಮಾಣದ ನಂತರ ಲಾರಿಗಳು, ಟ್ಯಾಂಕರ್ ಗಳು ಬಂದು ರಸ್ತೆಯಲ್ಲೇ ಗಂಟೆಗಟ್ಟಲೆ ನಿಲ್ಲುತ್ತಿವೆ. ಊರಿನ ಜನರಿಗೆ ನೀರಿನ ತೊಂದರೆಯಿರುವುದರಿಂದ ಟ್ಯಾಂಕರ್ ಲಾರಿಯನ್ನು ತರಬೇಕಿದೆ. ಆದರೆ ಲಾರಿ ಬರಲೇ ಸಾಧ್ಯವಾಗದೆ ಕುಡಿಯುವ ನೀರಿಗೆ ತಾತ್ಪರ್ಯ ಉಂಟಾಗುತ್ತಿದೆ. ಗ್ರಾಮದಲ್ಲಿ ಜಾತ್ರೆಯೂ ಇರುವುದರಿಂದ ಉತ್ಸವದ ವ್ಯವಸ್ಥೆ ಕಲ್ಪಿಸಲು ಅಸಾಧ್ಯವಾಗುತ್ತಿದೆ. 150 ಮನೆಗಳು ಇರುವ ಗ್ರಾಮದ ರಸ್ತೆಯ ತೊಂದರೆ ಹಲವು ವರ್ಷಗಳಿಂದ ಇದ್ದರೂ, ಊರಿನ ಜನರ ಒಗ್ಗಟ್ಟನ್ನು ರಾಜಕೀಯ ಶಕ್ತಿಗಳು ಮುರಿದು ಹಾಕುತಿತ್ತು. ಆದರೆ ಈ ಬಾರಿ ಅವೆಲ್ಲವನ್ನು ಬಿಟ್ಟು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದೇವೆ. ಒಂದು ವಾರದೊಳಗೆ ವಾಹನ ಚಲಿಸಲು ಅನುಕೂಲವಾಗುವ ರಸ್ತೆಯನ್ನು ನಿರ್ಮಿಸದೇ ಇದ್ದಲ್ಲಿ ತಲಪಾಡಿ ಗ್ರಾಮ ಪಂಚಾಯಿತಿ ಎದುರುಗಡೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತೇವೆ' ಎಂದು ಗ್ರಾಮದ ಮಹಿಳೆಯರು ಎಚ್ಚರಿಸಿದ್ದಾರೆ.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಯಶು ಪಕಳ, ಜಿ.ಪಂ ಮಾಜಿ ಸದಸ್ಯ ಸಿದ್ದೀಖ್ ಕೊಳಂಗೆರೆ, ಮುಖಂಡ ವರುಣ್ ರಾಜ್, ತಲಪಾಡಿ ಗ್ರಾ.ಪಂ ಸದಸ್ಯರಾದ ಅಂದು ತಲಪಾಡಿ, ವಾಣಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.