ಬಂಟ್ವಾಳ, ಫೆ. 4 (DaijiworldNews/SM): ಬಂಟ್ವಾಳ ತಾಲ್ಲೂಕಿನಲ್ಲಿರುವ ಪಾರ್ವತಿ ಪರಮೇಶ್ವರ ಆವಾಸಸ್ಥಾನವಾದ ಶ್ರೀ ಕಾರಿಂಜೇಶ್ವರ ದೇವಾಲಯದ ಸುತ್ತಮುತ್ತಲಿನ 2 ಕಿ .ಮೀ. ವ್ಯಾಪ್ತಿಯನ್ನು ಗಣಿಗಾರಿಕಾ ಚಟುವಟಿಕೆ ನಿಷೇಧಿತ ಪ್ರದೇಶವೆಂದು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಡಾ. ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಸಂಚಾಲಕ ತಿರುಲೇಶ್ ಬೆಳ್ಳೂರು ಸಲ್ಲಿಸಿದ ಮನವಿಯನ್ನು ಇದೀಗ ಜಿಲ್ಲಡಳಿತ ಪುರಸ್ಕರಿಸಿದೆ.
ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಗಾಗಿ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ಪಾವಿತ್ರ್ಯತೆ ಉಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತಿರುಲೇಶ್ ಬೆಳ್ಳೂರು, ಇವರು ಕರ್ನಾಟಕ ಸರ್ಕಾರದ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಿಗೆ ಉಲ್ಲೇಖ (1) ರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಮಾನ್ಯ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು ಸದರಿ ಮನವಿಯ ಕುರಿತು ಕೂಡಲೇ ಕ್ರಮಜರುಗಿಸಲು ಉಲ್ಲೇಖ (2) ರ ಪತ್ರದಲ್ಲಿ ನಿರ್ದೇಶನ ನೀಡಿತ್ತು.
ಆದ ಕಾರಣ, ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳು, ಮಂಗಳೂರು ಉಪ ವಿಭಾಗ ಹಾಗೂ ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ಇವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು ಕಾವಳಮುಡೂರು ಗ್ರಾಮದಲ್ಲಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ ರಕ್ಷಿತ ವಲಯವೆಂದು ಘೋಷಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲು ನಿರಂತರವಾಗಿ 2008 ರಿಂದಲೂ ಕರ್ನಾಟಕ ಸರ್ಕಾರದ ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಯವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಚಿವರುಗಳು, ಜಿಲ್ಲಾಧಿಕಾರಿಗಳು ಮತ್ತು
ತಾಲ್ಲೂಕು ಆಡಳಿತಕ್ಕೆ, ಸ್ಥಳೀಯ ಪ್ರಾಧಿಕಾರಿಗಳಿಗೆ ಹಿಂದೂ ಜಾಗರಣಾ ವೇದಿಕೆ ಮತ್ತು ಸ್ಥಳೀಯ ನಾಗರೀಕರಿಂದಹೋರಾಟ, ಮನವಿ, ಆಕ್ಷೇಪಣೆ, ದೂರುಗಳನ್ನು ಸಲ್ಲಿಸಿತ್ತು. ಇದೀಗ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.