ಮಂಗಳೂರು, ಫೆ 05 (DaijiworldNews/HR): ವೀರರಾಣಿ ಅಬ್ಬಕ್ಕ ಅವರ ಬಗ್ಗೆ ಜಾಗೃತಿ ಮೂಡಿಸಲು ಉಳ್ಳಾಲದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ 10 ಎಕರೆ ಜಾಗವನ್ನು ಮೀಸಲಿಟ್ಟಿದ್ದು, ಅಬ್ಬಕ್ಕ ಭವನವೊಂದೇ ಸಾಕಾಗುವುದಿಲ್ಲ. ಉಳ್ಳಾಲಕ್ಕೆ ಭೇಟಿ ನೀಡುವವರಲ್ಲಿ ಅಬ್ಬಕ್ಕನ ಬಗ್ಗೆ ಜಾಗೃತಿ ಮೂಡಿಸಲು ಥೀಮ್ ಪಾರ್ಕ್ ನ ಅವಶ್ಯಕತೆಯಿದೆ. ಉಳ್ಳಾಲಕ್ಕೆ ಭೇಟಿ ನೀಡುವವರು ಅಬ್ಬಕ್ಕನ ಬಗ್ಗೆ ಸ್ಪೂರ್ತಿದಾಯಕ ಕಥೆಯೊಂದಿಗೆ ತಮ್ಮ ಮನೆಗೆ ಮರಳಬೇಕು ಎಂದರು.
ಇನ್ನು ರಾಣಿ ಅಬ್ಬಕ್ಕ ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.