ಮಂಗಳೂರು, ಫೆ (DaijiworldNews/HR): ಅನುದಾನರಹಿತ ಖಾಸಗಿ ಕಾಲೇಜುಗಳ ಸಮಸ್ಯೆಗಳು ಹಾಗೂ ಶೈಕ್ಷಣಿಕ ಸಲಹೆಗಳನ್ನು ಶಿಕ್ಷಣ ಇಲಾಖೆ ಆಲಿಸುತ್ತಿಲ್ಲ. ಇದಕ್ಕಾಗಿ ಇತ್ತೀಚೆಗೆ ಕೆಯುಪಿಎಂಎ ಸಂಘಟನೆ ಸ್ಥಾಪಿಸಲಾಗಿದ್ದು, ಅನುದಾನರಹಿತ ಖಾಸಗಿ ಕಾಲೇಜುಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನ ನಡೆಸಲಾಗುವುದು ಎಂದು ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಹೇಳಿದರು.
ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ನಡೆದ ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಜಂಟಿ ಸಹಭಾಗಿತ್ವದಲ್ಲಿ ಪ್ರಾಚಾರ್ಯರ ಸಂಘದ ಡೈರಿ-23 ಬಿಡುಗಡೆ ಮತ್ತು ಹೊಸ ವಿನ್ಯಾಸದ ವೆಬ್ಸೈಟ್ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಇತ್ತೀಚೆಗೆ ಪಿಯುಸಿ ಪ್ರಶ್ನೆಪತ್ರಿಕೆಗಳ ಪರಿಷ್ಕಾರ ಮಾಡಲಾಗಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಪಾವಧಿಯಲ್ಲಿ ವಿದ್ಯಾರ್ಥಿಗಳು ಹೊಸ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ಶಿಕ್ಷಣ ತಜ್ಞರ ಜೊತೆಗೆ ಸೂಕ್ತ ವಿಚಾರವಿನಿಮಯ ನಡೆಸದಿರುವುದು ಇದಕ್ಕೆ ಕಾರಣ ಎಂದವರು ವಿವರಿಸಿದರು.
ದ.ಕ.ಜಿಲ್ಲಾ ಪ್ರಾಚಾರ್ಯರ ಸಂಘ ಸಕ್ರಿಯವಾಗಿದ್ದು, ಶಿಕ್ಷಕ-ವಿದ್ಯಾರ್ಥಿ-ಸರ್ಕಾರದ ಮಧ್ಯೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪ್ರಾಚಾರ್ಯರ ಡೈರಿ-23 ಬಿಡುಗಡೆಗೊಳಿಸಿದರು.
ಸಂಘದ ಹೊಸ ವಿನ್ಯಾಸದ ವೆಬ್ಸೈಟ್ನ ಅನಾವರಣ ನೆರವೇರಿಸಿ ಮಾತನಾಡಿದ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು, ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಪ್ರಾಂಶುಪಾಲರ ಪಾತ್ರ ಮಹತ್ತರವಾದುದು ಎಂದರು. ಅಧ್ಯಾಪನ ವೃತ್ತಿ ಬಹಳ ಪವಿತ್ರವಾದದುದು. ಅದರ ಪಾವಿತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಅವರು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕಾಲೇಜುಗಳು ವಿದ್ಯಾದೇಗುಲವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು. ಪರಿಪೂರ್ಣ ಶಿಕ್ಷಣದಿಂದ ವಿದ್ಯಾರ್ಥಿಗಳ ಮನೋವಿಕಾಸವಾಗುತ್ತದೆ. ಇಂಥ ಕಾರ್ಯವನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆಯು ಉತ್ತಮ ಫಲಿತಾಂಶ ದಾಖಲಿಸುವಲ್ಲಿ ದ.ಕ.ಜಿಲ್ಲಾ ಪ್ರಾಚಾರ್ಯರ ಸಂಘವು ಅವಿರತವಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಮತ್ತು ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಹಾಗೂ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕರಾದ ದ.ಕ.ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎನ್.ಗಂಗಾಧರ್ ಆಳ್ವ ಮತ್ತು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯದುಪತಿ ಗೌಡ ಅವರನ್ನು ಗೌರವಿಸಲಾಯಿತು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್, ದ.ಕ.ಜಿಲ್ಲಾ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷರಾದ ವಿಠಲ್, ಸುಧೀರ್, ವಿನಾಯಕ್, ಕೋಶಾಧಿಕಾರಿ ಕವಿತಾ, ಕಾರ್ಯಕ್ರಮ ನಿರ್ದೇಶಕ ಗುರುದತ್ತ್ ಎನ್. ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎನ್.ಗಂಗಾಧರ್ ಆಳ್ವ ಸ್ವಾಗತಿಸಿ, ಕಾರ್ಯದರ್ಶಿ ಯೂಸಫ್ ವಂದಿಸಿದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ಮಾರ್ಗದರ್ಶಿ ಸೂತ್ರಗಳ ಕುರಿತು ನಡೆದ ಸಭೆಯಲ್ಲಿ ದ.ಕ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಅವರು ಮಾಹಿತಿ ನೀಡಿದರು.