ಉಡುಪಿ,ಮಾ.13(AZM):ಪರೀಕ್ಷೆ ಭಯದಿಂದ ಮನೆಯಿಂದ ನಾಪತ್ತೆಯಾಗಿದ್ದ ಬಾಲಕನೋರ್ವ ಒಂದು ದಿನದ ಬಳಿಕ ಪತ್ತೆಯಾಗಿ ಪೋಷಕರ ಮಡಿಲು ಸೇರಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನಾಪತ್ತೆಯಾದ ಬಾಲಕನನ್ನು ಸಾಗರ್ (15) ಎಂದು ಗುರುತಿಸಲಾಗಿದೆ. ಉಡುಪಿಯ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ಈತನಿಗೆ ಈ ಹಿಂದೆ ಕಡಿಮೆ ಅಂಕ ಗಳಿಸಿದಕ್ಕೆ ತಂದೆ ಗದರಿಸಿದ್ದರೆನ್ನಲಾಗಿದೆ.
ಈ ಬಾರಿಯ ಪರೀಕ್ಷೆ ವೇಳೆ ತಂದೆಯ ಭಯದಿಂದ ಸಾಗರ್ ಮಾ.11 ರಂದು ಬೆಳಗ್ಗೆ 7ಗಂಟೆಗೆ ಉಡುಪಿ ಚಂದೂ ಮೈದಾನದ ಬಳಿ ಟ್ಯೂಶನ್ಗೆ ಹೋಗಿ ಅಲ್ಲಿಂದ ಎಂದಿನಂತೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದನು.
ಉಡುಪಿಯಿಂದ ಬಸ್ ಹತ್ತಿಕೊಂಡು ಸುರತ್ಕಲ್ಗೆ ಹೋದ ವಿದ್ಯಾರ್ಥಿ ಅಲ್ಲಿ ತಾಯಿಯ ನೆನಪಾಗಿ ಟೋಲ್ಗೇಟ್ ಬಳಿಯ ಹಣ್ಣು ಮಾರುವವರ ಮೊಬೈಲ್ ಪಡೆದು ತನ್ನ ತಾಯಿಗೆ ಮಿಸ್ ಕಾಲ್ ನೀಡಿ, ಮಾತನಾಡದೆ ಅಲ್ಲಿಂದ ಪುನಃ ಬಸ್ ಹತ್ತಿ ಉಡುಪಿಗೆ ಕಡೆ ಬಂದಿದ್ದನು ಎನ್ನಲಾಗಿದೆ. ವಿದ್ಯಾರ್ಥಿ ಸುರತ್ಕಲ್ ನಲ್ಲಿ ನೀಡಿದ ಮಿಸ್ ಕಾಲ್ ಆಧಾರದಲ್ಲಿ ಮನೆಯವರು ಸುರತ್ಕಲ್ಗೆ ತೆರಳಿ ವಿಚಾರಣೆ ನಡೆಸಿದ್ದರು.
ಈ ವೇಳೆ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ತಿರುಗಾಡುತ್ತಿದ್ದ ವಿದ್ಯಾರ್ಥಿ ರಾತ್ರಿ ಪೂರ್ತಿ ಅಲ್ಲೆ ಕಳೆದಿದ್ದನು ಎಂದು ತಿಳಿದುಬಂದಿದ್ದು, ಬುಧವಾರ ಮಧ್ಯಾಹ್ನದ ವೇಳೆ ವಿದ್ಯಾರ್ಥಿಯನ್ನು ಪರಿಚಯದವರೊಬ್ಬರು ನೋಡಿ ಆತನ ತಂದೆಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ವಿದ್ಯಾರ್ಥಿಯ ಪೋಷಕರು ವಿದ್ಯಾರ್ಥಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಪೊಲೀಸರು ಈ ಕುರಿತು ಹೇಳಿಕೆ ಪಡೆದುಕೊಂಡು ಬಳಿಕ ವಿದ್ಯಾರ್ಥಿಯನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.