ಉಡುಪಿ, ಫೆ 02 ( DaijiworldNews/SM): ನಿರಂತರ್ ಉದ್ಯಾವರ ಸಂಘಟನೆಯ ಐದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಉದ್ಯಾವರ ದೇವಾಲಯದ ವಠಾರದಲ್ಲಿರುವ ಐಸಿವೈಎಂ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ಆಯೋಜಿಸಿದ್ದ ಏಳು ದಿನಗಳ ಬಹುಭಾಷಾ ನಿರಂತರ್ ನಾಟಕೋತ್ಸವ ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರು ವಂ. ಸ್ನಾನಿ ಬಿ ಲೋಬೋ ಅವರು ಉದ್ಘಾಸಿದರು.
ಬಳಿಕ ಮಾತನಾಡಿದ ಅವರು, ನಾಟಕ ಒಂದು ಪ್ರಬಲವಾದ ಮಾಧ್ಯಮ. ನಾಟಕಗಳಿಂದ ಸಭಿಕರಿಗೆ ಉತ್ತಮ ಮೌಲ್ಯಗಳು ದೊರಕುತ್ತವೆ. ಉತ್ತಮ ನಾಟಕಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ, 'ಸಹಕಾರ ರತ್ನ' ಪ್ರಶಸ್ತಿ ಪುರಸ್ಕ್ರತ ಜಯಕರ್ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಏಳು ದಿನ ನಾಟಕ ಆಯೋಜನೆ ಮಾಡುವುದು ಅಷ್ಟು ಸುಲಭವಲ್ಲ. ಒಂದು ನಾಟಕದಿಂದ ಉತ್ತಮ ಸಂದೇಶ ದೊರಕಲು ಸಂಘಟಕರು ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತಹ ಉತ್ತಮ ಸಾಹಸಕ್ಕೆ ನಿರಂತರ್ ಉದ್ಯಾವರ ಮುಂದಡಿ ಇಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಭೂಮಿಗೀತಾ ತಂಡದಿಂದ 'ಹೇ ರಾಮ್' ಎನ್ನುವ ತುಳು ನಾಟಕ ಪ್ರದರ್ಶನಗೊಂಡಿತು. ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ರಂಗ ನಿರ್ದೇಶಕ ನಾಗೇಶ್ ಕುಮಾರ್ ಉದ್ಯಾವರ, ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ ಕಾರ್ಯದರ್ಶಿ ಒಲಿವೀರ ಮಥಾಯಸ್ ಮತ್ತು ಸಂಚಾಲಕ ರೊನಾಲ್ಡ್ ಡಿಸೋಜ, ಮೈಕಲ್ ಡಿಸೋಜ ಅವರು ಉಪಸ್ಥಿತರಿದ್ದರು.