ಉಳ್ಳಾಲ, ಫೆ 02 ( DaijiworldNews/SM): ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ೨೦೨೨-೨೩ ಫೆ.೪ ರಂದು ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಹೇಳಿದರು.
ಅವರು ಕುತ್ತಾರಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಬೆಳಿಗ್ಗೆ ೮.೩೦ ಕ್ಕೆ ವೀರ ಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ವೀರರಾಣಿ ಅಬ್ಬಕ್ಕ ಉತ್ಸವ ವೇದಿಕೆಗೆ ಆಕರ್ಷಕ ತುಳುನಾಡ ಜಾನಪದ ದಿಬ್ಬಣಕ್ಕೆ ಬೆಂಗಳೂರು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹಾಗೂ ಕೊಣಾಜೆ ಅಸೈಗೋಳಿ ಕೆಎಸ್ ಆರ್ ಪಿ ೭ನೇ ಬೆಟಾಲಿಯನ್ ನ ಬಿ.ಎಂ. ಪ್ರಸಾದ್ ಚಾಲನೆ ನೀಡಲಿದ್ದಾರೆ.
ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಧ್ವಜಾರೋಹಣಗೈಯ್ಯಲಿದ್ದಾರೆ. ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ಅಬ್ಬಕ್ಕ ಉತ್ಸವ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ-ಸಾಹಿತ್ಯ ಕಾರ್ಯಕ್ರಮಗಳನ್ನು ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಎಂ ಫಾರುಕ್ ಸಹಿತ ಗಣ್ಯರು ಉಪಸ್ಥಿತರಿರಲಿದ್ದಾರೆ.
ಅಪರಾಹ್ನ 3 ರಿಂದ ಮಹಿಳಾ ಬಹುಭಾಷಾ ಕವಿ ಕಾವ್ಯ ಗಾಯನದ ಅಧ್ಯಕ್ಷತೆಯನ್ನು ಅರುಣಾ ನಾಗರಾಜ್ ವಹಿಸಲಿದ್ದಾರೆ. ಪ್ರಮೀಳಾ ರಾಜ್, ಸಬಿತಾ ಕಾಮತ್ ಮರೋಳಿ, ರೇಣುಕಾ ಸುಧೀರ್, ಸಿಹಾನಾ ಬಿ.ಎಂ, ಗೀತಾ ಕೊಂಕೋಡಿ, ನಳಿನಾಕ್ಷಿ ಉದಯರಾಜ್, ಅರ್ಚನಾ ಬಂಗೇರ ಕುಂಪಲ ಇವರು ಕನ್ನಡ, ತುಳು, ಕೊಂಕಣಿ , ಬ್ಯಾರಿ, ಮಲಯಾಳಂ ಹಾಗೂ ಹವ್ಯಕ ಕನ್ನಡ ಭಾಷೆಗಳಲ್ಲಿ ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆ.
ಸಂಜೆ ೫ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಾಹಿತಿ ಡಾ| ಪಾರ್ವತಿ ಜಿ. ಐತಾಳ್ ಹಾಗೂ ಜಾನಪದ ಕಲಾವಿದೆ ಭವಾನಿ ಅವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕಾರ ಪ್ರಧಾನ ಮಾಡಲಿದ್ದಾರೆ. ಶಾಸಕ ಯು.ಟಿ ಖಾದರ್ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜಕ ಡಾ| ಗಣೇಶ್ ಅಮೀನ್ ಸಂಕಮಾರ್, ಶಾಸಕ ವೇದವ್ಯಾಸ ಕಾಮತ್ ಅಭಿನಂದನಾ ಭಾಷಣ ಮಾಡಲಿದ್ದಾರೆ.