ಬಂಟ್ವಾಳ, ಫೆ 02 ( DaijiworldNews/SM): ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಅವಧಿ ಮುಗಿದ ಒಂದು ಗ್ರಾಮ ಪಂಚಾಯತ್ ಗೆ ಚುನಾವಣೆ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾದ ಎರಡು ಗ್ರಾಮಪಂಚಾಯತ್ ಗಳ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಪೆ.25 ರಂದು ಚುನಾವಣೆ ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗವು 2023ರ ಜನವರಿಯಿಂದ ಎಪ್ರಿಲ್ ತಿಂಗಳವರೆಗೆ ಅವಧಿ ಮುಕ್ತಾಯವಾಗುವ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪದು ಗ್ರಾಮ ಪಂಚಾಯತ್ ನ 10 ವಾರ್ಡ್ ಗಳ 34 ಸದಸ್ಯ ಸ್ಥಾನಗಳಿಗೆ ಹಾಗೂ ವಿವಿಧ ಕಾರಣದಿಂದ ತೆರವಾದ 2 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಫೆ.8 ಬುಧವಾರ. ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಮತ್ತು ದಿನ ಫೆ.14 ಮಂಗಳವಾರ. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ ಫೆ.15 ಬುಧವಾರ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆ ದಿನಾಂಕ ಮತ್ತು ದಿನ ಫೆ.17 ಶುಕ್ರವಾರ. ಮತದಾನದ ದಿನ ಫೆ.25 ರಂದು ಶನಿವಾರ. ಮರು ಮತದಾನ ಅವಶ್ಯವಿದ್ದರೆ ಫೆ. 27 ಸೋಮವಾರ. ಮತ ಎಣಿಕೆ ದಿನ ಫೆ.28 ಮಂಗಳವಾರ. ಚುನಾವಣೆ ಫೆ.25 ರಂದು ಶನಿವಾರ ಬೆಳಿಗ್ಗೆ 7. ಗಂಟೆಯಿಂದ ಸಂಜೆ 5. ಗಂಟೆಯವರೆಗೆ ನಡೆಯಲಿದೆ.
ಮತದಾನ ಯಾವ ರೀತಿ
ಕಳೆದ ಬಾರಿ ನಡೆದ ಪುದು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮೆಷಿನ್ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಈ ಬಾರಿ ಅದೇ ಮಾದರಿಯಲ್ಲಿ ಮತದಾನ ನಡೆಯುತ್ತಾ? ಅಥವಾ ಹಳೆಯ ಮಾದರಿಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ನಡೆಯುತ್ತಾ ಎಂಬ ಸೂಚನೆ ಇನ್ನೂ ಕೂಡ ಬಂದಿಲ್ಲ ಎಂಬ ಮಾಹಿತಿಯನ್ನು ಬಂಟ್ವಾಳ ಚುನಾವಣಾ ಶಾಖೆಯ ಅಧಿಕಾರಿ ನವೀನ್ ಬೆಂಜನಪದವು ತಿಳಿಸಿದ್ದಾರೆ.