ವಿಶೇಷ ವರದಿ: ರಾಘವೇಂದ್ರ ಕುಂದಾಪುರ
ಕುಂದಾಪುರ,ಮಾ 13(MSP): ಊಟ, ನಿದ್ದೆ ಬಿಟ್ಟು ನೀರಿಗಾಗಿ ಕೊಡ ಹಿಡಿದು ನಳ್ಳಿಯ ಮುಂದೆ ಕಾದು ಕುಳಿತಿರುವ ಮಹಿಳೆಯರು. ಕೆಲಸಕ್ಕೆ ಹೋಗದೆ ನೀರಿಗಾಗಿ ಸೈಕಲ್ನಲ್ಲಿ ಕೊಡಪಾನಗಳನ್ನು ಕಟ್ಟಿಕೊಂಡು ಊರೂರು ಅಲೆಯುವ ಪುರುಷರು. ಈ ಊರಿನ ಸುತ್ತಲೂ ನದಿ ತುಂಬಿ ಹರಿದರೂ, ಇಲ್ಲಿನ ಜನರು ಕುಡಿಯಲು ಹನಿ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ. ಈ ಊರಿನ ದಲಿತಕೇರಿಯ ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಕಷ್ಟ ನೋಡಿದರೆ ಕಲ್ಲು ಹೃದಯವೂ ಕರಗುತ್ತದೆ.
ಕುಡಿಯುವ ನೀರಿಗಾಗಿ ಹಲವು ಯೋಜನೆಗಳನ್ನು ತಂದಿದ್ದೇವೆ, ಕೋಟಿಗಟ್ಟಲೆ ಅನುದಾನಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳು ಇನ್ನೂ ಈ ಕೇರಿಗೆ ಸುಸಜ್ಜಿತ ಸರ್ಕಾರಿ ಬಾವಿ ಕಲ್ಪಿಸದಿರುವುದು ದುರಂತ. ಕುಡಿಯುವ ನೀರಿಗೆ ಒತ್ತು ನೀಡಬೇಕಿದ್ದ ಪಂಚಾಯತ್ ನಿರ್ಲಕ್ಷ್ಯದಿಂದಾಗಿ ಈ ಊರಿನ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ದಿನಗಳೇನು ದೂರವಿಲ್ಲ!
ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ಎರಡನೇ ವಾರ್ಡ್ ಪೈಗಳ ಮನೆ ಸಮೀಪದ ದಲಿತ ಕೇರಿಯ ನಿವಾಸಿಗಳ ಸಂಕಷ್ಟ ಹೇಳತೀರದು. ಈ ಕೇರಿಯಲ್ಲಿ ಎಂಟು ದಲಿತ ಕುಟುಂಬಗಳು ಸೇರಿದಂತೆ ೨೦ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು ೧೫೦ಕ್ಕೂ ಅಧಿಕ ಜನಸಂಖ್ಯೆ ಇದೆ. ವಿಶೇಷವೇನೆಂದರೆ ಈ ಕಾಲನಿಯ ಬಹುತೇಕ ಕುಟುಂಬಗಳು ಅವಿಭಕ್ತ ಕುಟುಂಬಗಳಾಗಿವೆ. ಮೂರ್ನಾಲ್ಕು ಕುಟುಂಬಗಳು ಬಿಟ್ಟರೆ ಉಳಿದೆಲ್ಲಾ ಕುಟುಂಬಗಳು ಪಂಚಾಯತ್ಗೆ ಹಣ ಕಟ್ಟಿ ನಳ್ಳಿ ಹಾಕಿಸಿಕೊಂಡಿದ್ದಾರೆ. ಹಣ ವ್ಯಯಿಸಿ ನಳ್ಳಿ ಹಾಕಿಸಿಕೊಂಡರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ನಳದಲ್ಲಿ ನೀರು ಕಾಣದೆ ಎರಡು ಮೂರು ತಿಂಗಳುಗಳು ಕಳೆದಿವೆ. ಈ ಹಿಂದೆ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದ ಪಂಚಾಯತ್ ಕಳೆದ ಮೂರು ತಿಂಗಳುಗಳಿಂದ ಸರಿಯಾಗಿ ನೀರು ಬಿಡುತ್ತಿಲ್ಲ. ಒಮ್ಮೊಮ್ಮೆ ಬಿಟ್ಟರೂ ಹನಿಹನಿಯಾಗಿ ಬೀಳುವ ನೀರಿಗೆ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ನಳ್ಳಿಯ ಮುಂದೆ ಕೊಡ ಹಿಡಿದು ಕೂರಬೇಕಾದ ಪರಿಸ್ಥಿತಿ ಇದೆ. ಇನ್ನು ಈ ಬಗ್ಗೆ ಪಂಚಾಯತ್ಗೆ ಹೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ನೀರು ಬಿಡುತ್ತಾರೆಂಬ ದಿನದ ಇಪ್ಪತ್ತನಾಲ್ಕು ಗಂಟೆ ನಳ್ಳಿಯ ಮುಂದೆ ಊಟ, ನಿದ್ದೆ ಬಿಟ್ಟು ಕೂರುವ ಇಲ್ಲಿನ ಜನರ ತಾಳ್ಮೆಯ ಕಟ್ಟೆಯೂ ಒಡೆದಿದೆ.
ಉಪ್ಪಿನಕುದ್ರು ಸುತ್ತಲೂ ಪಂಚಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಊರಿನಲ್ಲಿ ಎಲ್ಲಿ ಬಾವಿ ತೋಡಿದರೂ ಉಪ್ಪು ನೀರಿನದ್ದೆ ಕಾರುಬಾರು. ಹೀಗಾಗಿ ಇಲ್ಲಿನ ಜನರು ಪಂಚಾಯತ್ ನೀರನ್ನೇ ಅವಲಂಭಿಸಿದ್ದಾರೆ. ಪ್ರತೀ ಬೇಸಿಗೆಯಲ್ಲೂ ಇಲ್ಲಿನ ಜನರಿಗೆ ನೀರಿನ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರದ ಗಮನ ಸೆಳೆಯಬೇಕಿದ್ದ ಸ್ಥಳೀಯ ಜನಪ್ರತಿನಿಧಿಗಳು ಈ ಸಮಸ್ಯೆ ತಮ್ಮದಲ್ಲ ಎಂಬಂತೆ ಕೈಕಟ್ಟಿ ಕೂತಿರುವುದೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ. ಇಲ್ಲಿನ ಜನರ ಸಂಕಷ್ಟ ಅರಿತು ಈ ಹಿಂದೆ ಎರಡು ಸರ್ಕಾರಿ ಬಾವಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ಎರಡೂ ಬಾವಿಗಳ ನೀರು ಕುಡಿಯುವುದು ಬಿಡಿ, ದಿನಬಳಕೆಗೂ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಎರಡು ಬಾವಿಗಳು ಮೂಲೆಗುಂಪಾಗಿವೆ. ಹತ್ತು ಕುಟುಂಬಗಳು ಸ್ವಂತ ಹಣದಲ್ಲಿ ನಳ್ಳಿ ಹಾಕಿಸಿಕೊಂಡರೆ ಅದರಲ್ಲೂ ನೀರು ಬರುತ್ತಿಲ್ಲ. ಒಂದು ಸಾರ್ವಜನಿಕ ನಳ್ಳಿ ಇದ್ದು, ಅದನ್ನೂ ತೆಗೆಯುವುದಕ್ಕೆ ಪಂಚಾಯತ್ ಮುಂದಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಉಪ್ಪಿನಕುದ್ರು ದಲಿತಕೇರಿಯ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ದಾರಿ ಸುಗಮವಾಗಿದೆ. ಈ ಭಾಗದಲ್ಲಿ ಸಾಕಷ್ಟು ವರ್ಷಗಳಿಂದ ಅಭಿವೃದ್ದಿ ಕಾಣದೆ ಬರಿದಾಗಿರುವ ಕೆಲ್ಸಿಕೇರಿ ಕೆರೆಯ ಹೂಳೆತ್ತಿ ತಡೆಗೋಡೆ ನಿರ್ಮಿಸಿದರೆ ಇಲ್ಲಿನ ನಿವಾಸಿಗಳಿಗೆ ಈ ಕೆರೆ ನೀರೆ ವರದಾನವಾಗಲಿದೆ. ಈ ಹಿಂದೆ ಈ ಕೆರೆಯ ನೀರನ್ನೇ ಬಳಸುತ್ತಿದ್ದು, ಕ್ರಮೇಣ ಕೆರೆ ಅಭಿವೃದ್ದಿ ಕಾಣದೆ ಇರುವುದರಿಂದ ಆ ಕೆರೆಯೂ ಮೂಲೆಗುಂಪಾಗಿ ಬಿದ್ದಿರುವುದು ನೀರಿನ ಸಮಸ್ಯೆಗೆ ಕಾರಣವಾಗಿದೆ. ಇನ್ನು ಇಲ್ಲಿನ ಜನರು ಉಪ್ಪು ನೀರನ್ನೇ ಕುಡಿಯಲು, ಅಡುಗೆಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಬಟ್ಟೆ ತೊಳೆಯಲೂ ಅದೇ ನೀರನ್ನು ಬಳಸಿಕೊಂಡರೆ ಇನ್ನೂ ಕೆಲವರು ಒಂದುವರೆ ಕಿ.ಮೀ ಸಾಗಿ ಗೋಪಾಲಕೃಷ್ಣ ದೇವಸ್ಥಾನದ ಕೆರೆಯಲ್ಲಿ ಬಟ್ಟೆ ತೊಳೆದುಕೊಂಡು ಬರುತ್ತಾರೆ. ಪುರುಷರು ಕೆಲಸ ಮುಗಿಸಿಕೊಂಡು ಅದೇ ಕೆರೆಯಲ್ಲಿ ಸ್ನಾನ ಮಾಡಿ ಮನೆಗೆ ತೆರಳುತ್ತಾರೆ. ಎಣ್ಣೆಯಂತ ಜಿಗುಟು ತೇಲುವ ಪದಾರ್ಥದಿಂದ ಈ ನೀರನ್ನು ಅಡುಗೆ ಹಾಗೂ ಕುಡಿಯಲು ಬಳಸಿಕೊಳ್ಳುವುದರಿಂದ ಈ ಊರಿನ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಇನ್ನು ಪಂಚಾಯತ್ ನೀರು ಬಿಡುತ್ತಿಲ್ಲವೆಂದು ಸಾಲ ಮಾಡಿ ಬಾವಿ ತೋಡಿಸಿಕೊಂಡರೆ ಆ ಬಾವಿಯಲ್ಲೂ ಉಪ್ಪು ನೀರು ಬರುತ್ತಿದೆ. ಕೆಲ ಕುಟುಂಬಗಳು ಸಾಲ ಮಾಡಿಕೊಂಡು ಬಾವಿ ತೋಡಿಸಿ ನಷ್ಟವಾಗಿದ್ದು ಇದೆ. ಇಷ್ಟೆಲಾ ಸಮಸ್ಯೆಗಳು ತಾಂಡವಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಗೋಜಿಗೂ ಹೋಗಿಲ್ಲ. ಇನ್ನಾದರೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಈ ಕೇರಿಯ ಜನರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.