ಮಂಗಳೂರು,ಫೆ 02 ( DaijiworldNews/MS): ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್ ನಲ್ಲಿ ಪ್ರಕಟಿಸಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಮೂಲಸೌಕರ್ಯ ಕ್ಷೇತ್ರದಲ್ಲಿ 10ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದ್ದು. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳು ಅನುದಾನ ನೀಡಿಲಾಗಿದೆ. ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.
ಕೋವಿಡ್ ನಂತರವೂ ಭಾರತ ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಹಣ ಹೂಡಿಕೆ, ಯುವ ಉದ್ಯಮಿಗಳು, ಕೃಷಿ ಸ್ಪಾರ್ಟನ್ ಗಳಿಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ಕೊಟ್ಟ ಆಯವ್ಯಯ ಪತ್ರ ಇದಾಗಿದೆ ಎಂದು ತಿಳಿಸಿದ್ದಾರೆ. ಮಧ್ಯಮ ವರ್ಗದವರಿಗೆ ನೀಡಿರುವ ತೆರಿಗೆ ವಿನಾಯಿತಿ ಬಗ್ಗೆ ಅವರು ಸಂತಸ ಸೂಚಿಸಿದ್ದಾರೆ.
ದೇಶವು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿದೆ. ದೇಶವನ್ನು ಸ್ವಾತಂತ್ರೋತ್ಸವದ ಶತಮಾನೋತ್ಸವದತ್ತ ಸದೃಢವಾಗಿ ಒಯ್ಯುವ ನಿಟ್ಟಿನಲ್ಲಿ ಇದೊಂದು ನೀಲನಕ್ಷೆಯಂತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.