ಕಾಸರಗೋಡು, ಫೆ 01 (DaijiworldNews/DB): ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ. ಇ. ಅಬ್ದುಲ್ಲ (65) ಇಂದು ಮಧ್ಯಾಹ್ನ ನಿಧನರಾದರು.
ಮೂರು ಬಾರಿ ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಕೆಲ ದಿನಗಳಿಂದ ಕೋಜಿಕ್ಕೊಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿದ್ಯಾರ್ಥಿ ಸಂಘಟನೆಯಾದ ಎಂ ಎಸ್ಎಫ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿ ದ್ದ ಅಬ್ದುಲ್ಲ ಅವರು 1978ರಲ್ಲಿ ತಲಂಗರೆ ವಾರ್ಡ್ ಮುಸ್ಲಿಂ ಲೀಗ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಯೂತ್ ಲೀಗ್ನ ಜಿಲ್ಲಾ, ರಾಜ್ಯ ಸಮಿತಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಇನ್ನಿತರ ಸ್ಥಾನಗಳನ್ನು ಅಲಂಕರಿಸಿದ್ದರು . 2018ರಿಂದ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯರಾಗಿದ್ದರು.
ಚೆರ್ಕಳಂ ಅಬ್ದುಲ್ಲ ಅವರ ನಿಧನದ ಬಳಿಕ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು .1988ರಲ್ಲಿ ಕಾಸರಗೋಡು ನಗರಸಭಾ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ಲ ಅವರು ಬಳಿಕ 2000 ಮತ್ತು 2005ರಲ್ಲಿಯೂ ಸದಸ್ಯರಾಗಿ ಆಯ್ಕೆಯಾಗಿದ್ದರು. 27 ವರ್ಷಗಳ ಕಾಲ ಕಾಸರಗೋಡು ನಗರಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮೂರು ಬಾರಿ ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 2000-2005ರ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯುತ್ತಮ ನಗರಸಭೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಅತ್ ಜನರಲ್ ಕಾರ್ಯದರ್ಶಿ , ಮಾಲಿಕ್ ದಿನಾರ್ ಜುಮಾ ಅತ್ ಮಸೀದಿ ಸಮಿತಿ ಉಪಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರು. ಟಿ. ಇ. ಅಬ್ದುಲ್ಲ ಅವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ.