ಮಂಗಳೂರು, ಫೆ 01 (DaijiworldNews/DB): 2020ರಲ್ಲಿ ನಡೆದ ಸುಳ್ಯದ ಉದ್ಯಮಿಯೊಬ್ಬರ ಕೊಲೆ ಪ್ರಕರಣದ ಆರೋಪಿಯನ್ನು ಇನ್ನೂ ಬಂಧಿಸದ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಮೇರೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಮೂಲ್ಕಿ ಠಾಣೆಯ ಎಸ್ಎಚ್ಒಗೆ ರಾಜ್ಯ ಹೈಕೋರ್ಟ್ನಿಂದ ಸಮನ್ಸ್ ಜಾರಿಯಾಗಿದೆ.
2020ರ ಜೂನ್ 5ರಂದು ಮೂಲ್ಕಿಯ ಬ್ಯಾಂಕ್ವೊಂದರ ಮುಂದೆ ಸುಳ್ಯದ ಉದ್ಯಮಿ ಅಬ್ದುಲ್ ಲತೀಫ್ ಅವರ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ 10 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಪಕ್ಷಿಕೆರೆಯ ಮುಸ್ತಾಫ ಎಂಬಾಂತನಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜಾಮೀನು ರದ್ದುಪಡಿಸುವಂತೆ ಕೋರಿ ಕೊಲೆಯಾದ ಅಬ್ದುಲ್ ಲತೀಫ್ ಅವರ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಬಳಿಕ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಮುಸ್ತಾಫನಿಗೆ ನೀಡಲಾದ ಜಾಮೀನನ್ನು ರದ್ದು ಮಾಡಿತ್ತು. ಆದರೆ ಈವರೆಗೆ ಆತನ ಬಂಧನವಾಗದ ಕಾರಣ ಅದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿದೆ. ನ್ಯಾಯವಾದಿ ಬಾಲಕೃಷ್ಣ ಎಂ.ಆರ್. ವಾದ ಮಂಡಿಸಿದ್ದರು. ಆರೋಪಿಯ ಬಂಧನವಾಗದ ಕುರಿತು ಫೆಬ್ರವರಿ 13ರೊಳಗೆ ವರದಿ ಒಪ್ಪಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಪ್ರಮುಖ ಆರೋಪಿಗಳಾದ ಕಾರ್ನಾಡಿನ ದಾವೂದ್ ಹಕೀಂ, ಮುಹಮ್ಮದ್ ಬಾವಾ ಯಾನೆ ಟಿಂಬರ್ ಬಾವ, ಉಲ್ಲಂಜೆ ನಿವಾಸಿ ಮುಹಮ್ಮದ್ ವಫಾ ಯಾನೆ ಮುಸ್ತಫಾ, ಕಾರ್ನಾಡ್ ನಿವಾಸಿ ಮುಹಮ್ಮದ್ ರಾಝಿಮ್, ಬಪ್ಪನಾಡು ನಿವಾಸಿ ಮುಹಮ್ಮದ್ ಹಾಶಿಮ್, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕರ್ ಸಿದ್ದೀಕ್, ಬಪ್ಪನಾಡು ನಿವಾಸಿ ರಿಯಾಝ್ ಯಾನೆ ನಿಸಾರ್, ಕಾಪಿಕಾಡ್ನ ಮಯ್ಯದ್ದಿ, ಪಕ್ಷಿಕೆರೆಯ ಬಶೀರ್ ಹುಸೈನ್ ಎಂಬವರನ್ನು ಬಂಧಿಸಲಾಗಿತ್ತು.