ಉಡುಪಿ, ಜ 31 (DaijiworldNews/DB): 2016ರಲ್ಲಿ ಮೈಸೂರಿನ ಜೈಲಿನಲ್ಲಿ ನಡೆದ ಮುಸ್ತಾಫ ನ ಕೊಲೆಯಿಂದ ಇತ್ತೀಚಿಗೆ ನಡೆದ ಫಾಜಿಲ್ ಕೊಲೆಯವರೆಗಿನ ಎಲ್ಲಾ ಕೊಲೆಗಳಲ್ಲಿ ಶರಣ್ ಪಂಪ್ವೆಲ್ ಪಾತ್ರ ಇರುವ ಸಂಶಯವಿದೆ. ಇದರ ಕುರಿತಾಗಿ ಎನ್ಐಎ ತನಿಖೆ ನಡೆಸಬೇಕು ಎಂದು ಎಸ್ಡಿಪಿ ಐ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೋಡ್ಲಿಪೇಟೆ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ್ ಪಂಪ್ ವೆಲ್ ಬಹಿರಂಗ ಭಾಷಣದಲ್ಲಿ ಕೊಲೆಯನ್ನು ಸ್ವಾಗತಿಸಿದ್ದಾರೆ. ಏನಿದರ ಅರ್ಥ?, ಎಲ್ಲಿದ್ದಾರೆ ಗೃಹ ಮಂತ್ರಿಗಳು? ಕೊಲೆಗಡುಕರಿಗೆ ಇಷ್ಟೊಂದು ಬಹಿರಂಗವಾಗಿ ಮಾತನಾಡಲು ಅವಕಾಶ ನೀಡಿದವರು ಯಾರು? ಇಂದಿನ ಮುಖ್ಯಮಂತ್ರಿಯಾಗಿರವ ಬಸವರಾಜ ಬೊಮ್ಮಾಯಿಯವರು ಗೃಹ ಮಂತ್ರಿ ಆಗಿರುವಾಗ ಮಂಗಳೂರಿನಲ್ಲಿ ಇದೇ ಶರಣ್ ಪಂಪ್ ವೆಲ್ ಗೆ ನಿನ್ನ ಮೇಲಿರುವ ಎಲ್ಲಾ ಕೇಸ್ಗಳನ್ನು ಹಿಂತೆಗೆಯುತ್ತೇವೆ ಎಂದು ಭರವಸೆ ನೀಡಿದ್ದರು. ಶರಣ್ ಪಂಪ್ ವೆಲ್ನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಫಾಜಿಲ್, ಜಲೀಲ್ ಕೊಲೆಯನ್ನು ಎನ್ ಐ ಎ ತನಿಖೆಗೆ ವಹಿಸುವುದಿಲ್ಲ. ಕೇವಲ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಮಾತ್ರ ಎನ್ಐಎಗೆ ಏಕೆ ನೀಡಲಾಗುತ್ತದೆ? ನ್ಯಾಯ ಹಂಚಿಕೆಯಲ್ಲೂ ತಾರತಮ್ಯ ಯಾಕೆ ಎಂದು ಅವರು ಪ್ರಶ್ನಿಸಿದರು.
ಚುನಾವಣಾ ತಯಾರಿಯ ಕುರಿತು ಮಾತನಾಡಿದ ಅಪ್ಸರ್ ಕೋಡ್ಲಿಪೇಟೆ, ಈಗಾಗಲೇ ಎಸ್ಡಿಪಿ ಐನ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವು 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ದಕ್ಷಿಣ ಕನ್ನಡದ 8 ಕ್ಷೇತ್ರ ಮತ್ತು ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಬಂದ ಮೇಲೆ ಕರ್ನಾಟಕದ 6 ಕೋಟಿ ಜನರು ಇಡೀ ದೇಶದ ಎದುರು ತಲೆ ತಗ್ಗಿಸುವಂತಾಗದೆ. ಭದ್ರಾ ನೀರಾವರಿ ಯೋಜನೆಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 10 ಶೇಕಡಾ ಕಮಿಷನ್ ಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಆರು ತಿಂಗಳಾದರೂ ಇನ್ನೂ ಉತ್ತರ ಬಂದಿಲ್ಲ. ಕಮಿಷನ್ ಈ ದಂಧೆ ಈ ಹಿಂದೆ ಕೂಡಾ ಇತ್ತು, ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಟೆಂಡರ್ ಅನುಮೋದನೆ ಗೆ 5 ಶೇಕಡಾ, ಕಾಮಗಾರಿಯ ಬಿಲ್ ಪಾಸ್ ಮಾಡಲು 40 ಶೇಕಡಾ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಹೆಣ್ಣು ಮಕ್ಕಳ ತಲೆಯ ಮೇಲೆ ಇರುವ ತುಂಡು ಬಟ್ಟೆಯನ್ನು ಸಹಿಸಲು ನಿಮಗೆ ಸಾಧ್ಯ ಆಗಲಿಲ್ಲ, ರಾಜ್ಯದ ಶಾಲಾ – ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನು ಸರಿ ಮಾಡಲು ಆಗಿಲ್ಲ, ಇಂತಹ ದುರ್ಗತಿ ನಮ್ಮ ರಾಜ್ಯಕ್ಕೆ ಬಂದಿದೆ. ಮೂಲಭೂತ ಸೌಕರ್ಯದ ಕೊರತೆಯ ಕಾರಣದಿಂದ ನಷ್ಟಕ್ಕೆ ಒಳಗಾದ ಐಟಿ – ಬಿಟಿ ಕಂಪನಿಗಳು ತಮಿಳುನಾಡು ಮತ್ತು ಹೈದರಾಬಾದ ನತ್ತ ಮುಖ ಮಾಡಿವೆ. ಕಾಂಗ್ರೆಸ್ ನಲ್ಲಿ ಗೆದ್ದ 14 ಜನ ಶಾಸಕರು ಬಾಂಬೆ ರೆಸಾರ್ಟ್ ನಲ್ಲಿ ಕುರಿ, ಕೋಳಿಯಂತೆ ಖರೀದಿ ಮಾಡಿದ್ದಾರೆ. ನಮ್ಮ ರಾಜಕೀಯ ಈ ರಾಜ್ಯದ ಬಡವರ, ಕಾರ್ಮಿಕರ, ದೀನ ದಲಿತರ ಪರವಾಗಿ. ಉಡುಪಿ ಜಿಲ್ಲೆಯ ಜನರು ಒಂದು ಅವಕಾಶ ನಮಗೆ ಕೊಡಿ, ನಿಮ್ಮ ಋಣವನ್ನು ತೀರಿಸಲು ನಾವು ಕಟಿ ಬದ್ದರಾಗಿರುತ್ತೇವೆ. ನಾವು ಜಾತಿವಾದ, ಹಣ ಬಲದಲ್ಲಿ ಭರವಸೆ ಇಟ್ಟಿಲ್ಲ. ಜನಸೇವೆ ಆಧಾರದಲ್ಲಿ ನಾವು ಮತ ಕೇಳುತ್ತೇವೆ ಎಂದರು.
ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಪ ಕೊಡ್ಲಿಪೇಟೆ, ಕಾಪು ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಹನೀಫ್ ಮೂಳೂರು, ಎಸ್ಡಿಪಿಐ ರಾಜ್ಯ ಮುಖಂಡ ನವಾಝ್ ಉಳ್ಳಾಲ್, ಎಸ್ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಖಲೀಲ್ ಅಹ್ಮದ್ ಉಪಸ್ಥಿತರಿದ್ದರು.