Karavali
ಉಳ್ಳಾಲ: 'ಯುಯುಸಿಎಂಎಸ್ಗೆ ಫಲಿತಾಂಶ ಪ್ರಕಟಿಸಲು ಅಸಾಧ್ಯವಾದಲ್ಲಿ ವಿವಿಯೇ ನೀಡಲಿದೆ'- ಪ್ರೊ| ಯಡಪಡಿತ್ತಾಯ
- Tue, Jan 31 2023 06:47:30 PM
-
ಉಳ್ಳಾಲ, ಜ 31 (DaijiworldNews/DB): ಯುಯುಸಿಎಂಎಸ್ಗೆ ಫಲಿತಾಂಶ ಪ್ರಕಟಿಸಲು ಅಸಾಧ್ಯವಾದಲ್ಲಿ ವಿಶ್ವವಿದ್ಯಾನಿಲಯವೇ ಫಲಿತಾಂಶ ಪ್ರಕಟಿಸಲಿದೆ. ಫೆಬ್ರವರಿ15ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು. ಆ ಬಳಿಕ ಅವರ ವೆಬ್ ಪೋರ್ಟಲ್ ಅಪ್ಲೋಡ್ ಮಾಡುವ ಕುರಿತು ಇಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಹೇಳಿದ್ದಾರೆ.
ಕೊಣಾಜೆ ಮಂಗಳ ಗಂಗೋತ್ರಿಯ ಸಿ.ವಿ. ರಾಮನ್ ವೃತ್ತದಲ್ಲಿ ಇಂದು ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಶೈಕ್ಷಣಿಕ ಮತ್ತು ಹಾಸ್ಟೆಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಸೇರಿ ಆಯೋಜಿಸಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ರಿವ್ಯಾಲ್ಯುವೇಷನ್, ಪೇಪರ್ ಸೀಯಿಂಗ್ ಆಗದೇ ಪರೀಕ್ಷೆಗೆ ಶುಲ್ಕ ಕಟ್ಟಲು ತಿಳಿಸಿದ್ದಾರೆಂದು ಮಾಧ್ಯಮದಲ್ಲಿ ಬಂದಿರುವ ವರದಿ ಸಂಬಂಧಿಸಿ ಇಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಪರೀಕ್ಷಾಂಗ ಕುಲಸಚಿವರು ಸ್ಪಷ್ಟೀಕರಣ ನೀಡಲಿದ್ದಾರೆ. ಸ್ಕಾಲರ್ ಶಿಪ್ ಸಂಬಂಧಿಸಿದ ವಿಚಾರಕ್ಕೆ ಸಮಾಜಕಲ್ಯಾಣ ಇಲಾಖೆಯ ಜೊತೆಗೆ ಇಂದು ಕರೆಯಲಾಗಿದ್ದ ಸಭೆಯನ್ನು ಮುಂದಕ್ಕೆ ಹಾಕಲಾಗುವುದು. ಎನ್ ಎಸ್ ಬಿ ಸ್ಕಾಲರ್ ಶಿಪ್ನಿಂದ ವಂಚಿತರಾಗದಂತೆ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಹಾಸ್ಟೆಲ್ ಸಂಬಂಧಿಸಿದಂತೆ ಕೆಲವರು ವಿದ್ಯುತ್ ಜಾಸ್ತಿ ಉಪಯೋಗಿಸುತ್ತಾರೆ ಅನ್ನುವ ಕಾರಣಕ್ಕೆ ಪ್ರತಿಯೊಂದು ರೂಮ್ಗೆ ಪ್ರತ್ಯೇಕ ಮೀಟರ್ ಅಳವಡಿಸಲಾಗಿದೆ. ಇಲ್ಲಿಯವರೆಗೆ ಹೌಸ್ ಕೀಪಿಂಗ್ ಹಣವನ್ನು ವಿದ್ಯಾರ್ಥಿಗಳ ಕಡೆಯಿಂದ ಪಡೆಯಲಾಗುತಿತ್ತು, ಮುಂದಕ್ಕೆ ವಿ.ವಿ ಯ ಸಾಮಾನ್ಯ ಹೌಸ್ ಕೀಪಿಂಗ್ ಕಡೆಯವರಲ್ಲಿ ಮಾಡಿಸಲಾಗುವುದು. ಅಡುಗೆ ಕೋಣೆ, ಸಭಾಂಗಣದ ವಿದ್ಯುತ್ ಬಿಲ್ನ್ನು ವಿ.ವಿ ಆಡಳಿತವೇ ಕಟ್ಟುತ್ತದೆ. 600 ರೂಗಳನ್ನು ಪ್ರತಿ ವಿದ್ಯಾರ್ಥಿಗೆ ಫಿಕ್ಸ್ ಮಾಡಲಾಗಿದ್ದು, ಫೆ.15ರ ಒಳಗಡೆ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಪತ್ರ ವ್ಯವಹಾರ ಎಲ್ಲಾ ಮುಗಿದಿದ್ದು, ಹತ್ತು ದಿನಗಳ ಒಳಗೆ ಲ್ಯಾಪ್ ಟಾಪ್ ಎಲ್ಲರ ಕೈ ಸೇರಲಿದೆ. ಸಿಗಲು ಬಾಕಿಯಿದ್ದವರ ಕೋರ್ಸ್ ಮುಗಿದವರಿಗೂ ಲ್ಯಾಪ್ ಟಾಪ್ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಯಲ್ ಧರ್ಮ ಮಾತನಾಡಿ, ಯುಯುಸಿಎಂಎಸ್ ಮಾಡುತ್ತಿರುವ ತಪ್ಪಿಗೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸರಕಾರದ ಜತೆಗೆ ನಾನು ಹೋರಾಡುತ್ತಿದ್ದೇನೆ. ವಿದ್ಯಾರ್ಥಿಗಳ ಧ್ವನಿಯಾಗಿ ನಿತ್ಯ ತಾಂತ್ರಿಕ ಇಂಜಿನಿಯರ್ ಮನೋಹರ್ ಎಂಬವರ ಮೂಲಕ ತನಗೆ ಬರುವ ನೂರಾರು ಎಸ್ ಎಂಎಸ್ ಮತ್ತು ಇಮೇಲ್ ಗಳನ್ನು ಸರಕಾರಕ್ಕೆ ಕಳುಹಿಸುತ್ತಿದ್ದೇನೆ. ಎರಡು ವರ್ಷಗಳಿಂದ ಇದರ ಹಿಂದೆ ಬಿದ್ದು ಸಮಯ ಕಳೆದುಕೊಳ್ಳುತ್ತಿದ್ದೇನೆ. ವಿಶ್ವ ವಿದ್ಯಾನಿಲಯದಲ್ಲಿ ಖಾಯಂ ಸಿಬ್ಬಂದಿಗಳೇ ಇಲ್ಲ. ಅತಿಥಿ ಉಪನ್ಯಾಸಕರೇ ಹೆಚ್ಚಿದ್ದಾರೆ. ಇದರಿಂದಾಗಿ ಮೊನ್ನೆಯಷ್ಟೇ ಉತ್ತರಪತ್ರಿಕೆ ತಿದ್ದುವ ಕಾರ್ಯ ಮುಗಿದಿರುವುದು ಬೇಸರ ತರುತ್ತದೆ. ಮೂರನೇ ವ್ಯಾಲ್ಯುಯೇಷನ್ ಆಗುತ್ತಿದ್ದು, ಹಲವರು ಚಾಲೆಂಜಿಂಗ್ ವ್ಯಾಲ್ಯುವೇಷನ್ ಗೆ ಅರ್ಜಿ ಹಾಕಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಇಲೆಕ್ಟಿವ್ ಪೇಪರ್ ನ್ನು ಪ್ರತಿಯೊಬ್ಬ ಚೇರ್ ಪರ್ಸನ್ ಅಪ್ರೂವಲ್ ಮಾಡಬೇಕಿದೆ. ಪ್ರಕ್ರಿಯೆಗಳು ಸಂಪೂರ್ಣವಾಗಿ ಆಗಿಲ್ಲ. ಈ ಕುರಿತು ಪ್ರತಿ ವಿಭಾಗಕ್ಕೆ ನೆನಪಿಸುವ ಕಾರ್ಯಗಳು ನಿರಂತರವಾಗಿ ಆಗಿದೆ. ಇದರಿಂದ ಫಲಿತಾಂಶದಲ್ಲಿ ವಿಳಂಬವಾಗಿದೆ ಎಂದರು.
ನಿರಂತರ ಸೂಚನೆ ಬಳಿಕ ಜ. 26ಕ್ಕೆ ಪ್ರಕ್ರಿಯೆ ಮುಗಿದಿದೆ. ಇದನ್ನು ಯುಯುಸಿಎಂಎಸ್ ಗೆ ಅಪ್ಲೋಡ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದರ ತಾಂತ್ರಿಕ ತಂಡವನ್ನು ವಿ.ವಿ ಸಿಂಡಿಕೇಟ್ ಸಭೆಗೆ ಆಹ್ವಾನಿಸಲಾಗಿದ್ದು, ಇಲ್ಲಿ 20% ಕ್ಕಿಂತ ಜಾಸ್ತಿಯಿದ್ದವರಿಗೆ ಗ್ರೇಸ್ ಮಾರ್ಕ್ ನೀಡುವ ಕುರಿತು ಚರ್ಚೆಯಿದೆ. ಅದು ಇನ್ನೂ ರಾಜ್ಯ ತಂಡದಿಂದ ಬಗೆಹರಿದಿಲ್ಲ. ತಪ್ಪು ಫಲಿತಾಂಶ ನೀಡುವ ಬದಲಾಗಿ ನ್ಯಾಯಯುತ ಫಲಿತಾಂಶ ನೀಡುವ ಉದ್ದೇಶದಿಂದ ಯುಯುಸಿಎಂಎಸ್ ಜತೆಗೆ ಚರ್ಚಿಸುತ್ತಿದ್ದೇವೆ ಎಂದವರು ತಿಳಿಸಿದರು.
ವಿದ್ಯಾರ್ಥಿ ಶಕ್ತಿ ತೋರಿಸಿದ್ದೇವೆ. ವ್ಯಕ್ತಿಯ ವಿರುದ್ಧ ಹೋರಾಟವಲ್ಲ, ವ್ಯವಸ್ಥೆಯ ವಿರುದ್ಧ ಹೋರಾಟ. ಯಾರ ರಾಜೀನಾಮೆಯ ಅವಶ್ಯಕತೆಯಿಲ್ಲ. ನ್ಯಾಯವಷ್ಟೇ ಸಿಗಬೇಕು. ಭರವಸೆಯಂತೆ 10 ದಿನಗಳ ಒಳಗಡೆ ನ್ಯಾಯ ಸಿಗದೇ ಇದ್ದಲ್ಲಿ ಉಗ್ರ ರೀತಿಯಲ್ಲಿ ಹೋರಾಡುತ್ತೇವೆ ಎಂದು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಗಿರೀಶ್ ಎಚ್ಚರಿಕೆ ನೀಡಿದರು.
ಎಂಟು ವಿಭಾಗಗಳ ವಿದ್ಯಾರ್ಥಿಗಳು ಮೂರು ಸೆಮಿಸ್ಟರ್ ನ ಅಧ್ಯಯನ ನಡೆಸುತ್ತಿದ್ದರೂ, ಈವರೆಗೂ ಮೊದಲ ಸೆಮಿಸ್ಟರ್ ಫಲಿತಾಂಶ ಬಂದಿಲ್ಲ. ನಾಲ್ಕನೇ ಸೆಮಿಸ್ಟರ್ ಪಾಸೌಟ್ ಆದವರಿಗೂ ಈವರೆಗೆ ಫಲಿತಾಂಶ ಕೈ ಸೇರಿಲ್ಲ. ಎನ್ ಎಸ್ ಬಿ, ಎಸ್ ಎಸ್ ಬಿ ಸ್ಕಾಲರ್ ಶಿಪ್ ಎಲ್ಲಾ ಕೈತಪ್ಪಿ ಹೋಗಿದೆ. ಎಸ್ ಎಸ್ ಬಿಯನ್ನು ವಿ.ವಿ ಆಡಳಿತ ಮುಂದೆ ಹಾಕಬಹುದು. ಆದರೆ ಎಷ್ಟೋ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ನಂಬಿಕೊಂಡೇ ಅಧ್ಯಯನ ನಡೆಸುವವರಿದ್ದಾರೆ. ಖಾಸಗಿ ಸ್ಕಾಲರ್ ಶಿಪ್ ಸೇರಿದಂತೆ ಎನ್ ಎಸ್ ಬಿ ಎಲ್ಲವೂ ಕೈಗೇ ಸಿಗದೇ ವಿಭಾಗಗಳಲ್ಲಿ ಉಳಿಯಲು ಆರ್ಥಿಕತೆಯ ಸಂಕಷ್ಟ ಎದುರಾಗುತ್ತಿದೆ. ವಿಭಾಗದವರು ಮಾಡಿರುವ ಲೋಪದೋಷಕ್ಕೆ ನಾವು ಹೊಣೆಗಾರರಲ್ಲ. ಮುಖ್ಯಸ್ಥರೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ವಿಪಕ್ಷ ಉಪನಾಯಕರು ಸದನದಲ್ಲಿ ಚರ್ಚಿಸಿದಾಗ, ಉನ್ನತ ಶಿಕ್ಷಣ ಸಚಿವರು ತಕ್ಷಣ ಗೊಂದಲಗಳನ್ನು ಪರಿಹರಿಸಿ ಫಲಿತಾಂಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದರು.ಕೌನ್ಸಿಲ್ ಕಮಿಟಿಯೇ ಇಲ್ಲ. ಕೌನ್ಸಿಲ್ ಕಮಿಟಿಯೇ ನಡೆದಿಲ್ಲ. ಮೂರನೇ ಸೆಮಿಸ್ಟರ್ ಮುಗಿಯುತ್ತಾ ಬಂದಿದೆ. ಚುನಾವಣೆ ಘೋಷಣೆಯಾದ ನಂತರ ನಾಮಿನೇಷನ್ ಆದ ಬಳಿಕ ಲಿಂಗ್ಡೋ ಕಮಿಟಿಯನ್ನು ಎದುರುಹಾಕಿ ರದ್ದುಗೊಳಿಸಲಾಗಿದೆ ಎಂದು ವಿದ್ಯಾರ್ಥಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರೊಫೆಸರ್ ಓರ್ವರು, ನಾಮಿನೇಷನ್ ಫೈಲ್ ಮಾಡಿದ ಇಬ್ಬರ ಫಲಿತಾಂಶ ಬಾರದೆ ಚುನಾವಣೆಗೆ ಸ್ಪರ್ಧಿಸಲು ಅಸಾಧ್ಯವಾಗಿತ್ತು. ಪ್ರಕ್ರಿಯೆ ಮುಂದುವರಿಸಿದರೆ ಇಬ್ಬರಿಗೆ ಅನ್ಯಾಯವೆಸಗಿದಂತೆ ಆಗುವುದು ಎಂದು ತಿಳಿಸಿದರು.
ಇಂಜಿನಿಯರಿಂಗ್ ಸೆಕ್ಷನ್ ನ ಬಹಳ ಸಮಸ್ಯೆ, ಹಾಸ್ಟೆಲ್ ಬ್ಯಾಕ್ ಗೇಟಿನಲ್ಲಿ ಲೈಟಿಲ್ಲ. ಲೈಟ್ ಹಾಕಲು ಏಣಿಯಿಲ್ಲ ಅನ್ನುತ್ತಾರೆ, ಸಿಸಿಟಿವಿಯೂ ಬಿಸಿನೀರಿನ ವ್ಯವಸ್ಥೆಯೂ ಇಲ್ಲ. ಎಸ್ಟಾಬ್ಲಿಷ್ಮೆಂಟ್ ಚಾರ್ಜ್ 2,40,00 ರೂ. ಸಂಗ್ರಹವಾಗುತ್ತಿದೆ. ಆ ಹಣ ಎಲ್ಲಿ ಹೋಗುತ್ತಿದೆ ಅನ್ನುವುದು ಗೊತ್ತಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳದಲ್ಲಿ ಕೊಣಾಜೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈ ವೇಳೆ ಕುಲಸಚಿವ ಡಾ| ಕಿಶೋರ್ ಕುಮಾರ್ ಸಿ.ಕೆ., ವಿದ್ಯಾರ್ಥಿ ಮುಖಂಡರಾದ ಜೀವವಿಜ್ಞಾನ ವಿಭಾಗದ ಗೌತಮ್, ಅನ್ವೇಷಕ ಸಸ್ಯಶಾಸ್ತ್ರದ ಪ್ರಜ್ವಲ್
, ಕೈಗಾರಿಕ ರಸಾಯನಶಾಸ್ತ್ರದ ಪ್ರಮೀತಾ ಮುಂತಾದವರು ಉಪಸ್ಥಿತರಿದ್ದರು.