ಕುಂದಾಪುರ, ಜ 31 (DaijiworldNews/HR): ನಿಲ್ಲಿಸಿದ್ದ ಟಾಟಾ ಏಸ್ ವಾಹನಕ್ಕೆ ಹಿಂದಿನಿಂದ ಬಂದ ಇನ್ಸುಲೇಟರ್ ವಾಹನವೊಂದು ಡಿಕ್ಕಿಹೊಡೆದು ಇನ್ಸುಲೇಟರ್ ಚಾಲಕ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಪ್ಪುಂದದ ಫ್ಲೈಓವರ್ ನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಕಾಂಕ್ರೀಟ್ ಹಾಕಲು ಬಳಸುವ ಮರದ ಹಲಗೆ ಮತ್ತು ರೀಪುಗಳನ್ನು ತುಂಬಿಸಿಕೊಂಡು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಟಾಟಾ ಏಸ್ ವಾಹನ ಉಪ್ಪುಂದ ಅಂಬಾಗಿಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿದ್ದಂತೆ ಟಯರ್ ಪಂಕ್ಚರ್ ಆಗಿತ್ತು. ಟಾಟಾ ಏಸ್ ಚಾಲಕ ವಾಹನ ನಿಲ್ಲಿಸಿ ಟಯರ್ ಬದಲಾಯಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಬೆಂಗಳೂರಿನ ಶ್ರೀ ವಿನಾಯಕ ಕ್ಯಾರಿಯರ್ಸ್ ಮಾಲೀಕತ್ವಕ್ಕೆ ಸೇರಿದ ಇನ್ಸುಲೇಟರ್ ವಾಹನ ಡಿಕ್ಕಿಹೊಡೆದಿದೆ.
ಇನ್ನು ಅಪಘಾತದ ವೇಗಕ್ಕೆ ನಿಲ್ಲಿಸಿದ್ದ ಟಾಟಾ ಏಸ್ ಮುಂದಕ್ಕೆ ಚಲಿಸಿ ಡಿವೈಡರ್ ಏರಿ ನಿಂತಿದ್ದು, ಇನ್ಸುಲೇಟರ್ ಮುಂಭಾಗ ನುಜ್ಜುಗುಜ್ಜಾಗಿದ್ದು, ಚಾಲಕನ ಕಾಲು ಮುರಿತಕ್ಕೊಳಗಾಗಿದೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.