ಮಂಗಳೂರು, ಜ 31 (DaijiworldNews/DB): ಬೀಡಿ ಗುತ್ತಿಗೆದಾರರಿಗೆ ಹೆಚ್ಚುವರಿ ಕಮಿಷನ್ ನೀಡದೇ ಇದ್ದಲ್ಲಿಕರಾವಳಿ ಜಿಲ್ಲೆಗಳ ಬೀಡಿ ಗುತ್ತಿಗೆದಾರರು ಅನಿದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದುದಾಗಿ ಬೀಡಿ ಗುತ್ತಿಗೆದಾರರ ಒಕ್ಕೂಟ ಎಚ್ಚರಿಕೆ ನೀಡಿದೆ. ಹೆಚ್ಚುವರಿ ಕಮಿಷನ್ ಸಂಬಂಧ ಮಾತುಕತೆಗಾಗಿ ಫೆಬ್ರವರಿ 10ರ ಗಡುವು ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಬೀಡಿ ಗುತ್ತಿಗೆದಾರರ ಒಕ್ಕೂಟದ ಕಾರ್ಯಾಧ್ಯಕ್ಷ ಮಹಮ್ಮದ್ ರಫಿ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಮಂಜೇಶ್ವರ, ಕಾಂಞಗಾಡ್ ಮುಂತಾದೆಡೆಗಳಲ್ಲಿ ಸುಮಾರು ಐದು ಸಾವಿರ ಸದಸ್ಯರು ಒಕ್ಕೂಟದಲ್ಲಿದ್ದಾರೆ. ವಿವಿಧ ಮಾರ್ಕಿನ ಬೀಡಿ ಸಂಸ್ಥೆಗಳಿಂದ ಗುತ್ತಿಗೆದಾರರು ಎಲೆ, ತಂಬಾಕು ಮತ್ತಿತರ ವಸ್ತುಗಳನ್ನು ಪಡೆದು ಅದನ್ನು ಬೀಡಿ ಕಾರ್ಮಿಕರಿಗೆ ವಿತರಿಸಿ ಅದರಿಂದ ತಯಾರಾದ ಬೀಡಿಯನ್ನು ಕಾರ್ಮಿಕರಿಂದ ಪಡೆದು ಕಂಪೆನಿಗಳಿಗೆ ತಲುಪಿಸುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಆದರೆ ಅವರ ಈ ದುಡಿಮೆಗೆ ಕೇವಲ ಒಂದು ಸಾವಿರ ಬೀಡಿಯ ಮೇಲೆ ಕಮಿಷನ್ ನೀಡಲಾಗಿದ್ದು, ಇತರ ಯಾವುದೇ ಸೌಲಭ್ಯಗಳಿರುವುದಿಲ್ಲ ಎಂದು ಆರೋಪಿಸಿದರು.
ಹೆಚ್ಚುವರಿ ಕಮಿಷನ್ಗಾಗಿ ಪ್ರತಿ ವರ್ಷ ಆಡಳಿತ ವರ್ಗಕ್ಕೆ ಒತ್ತಾಯಿಸುತ್ತಲೇ ಬಂದಿದ್ದರೂ, ಆಡಳಿತ ವರ್ಗ ಕ್ಯಾರೇ ಎನ್ನುತ್ತಿಲ್ಲ. ಏಪ್ರಿಲ್ನಲ್ಲಿ ಹೆಚ್ಚುವರಿ ಕಮಿಷನ್ ನೀಡದೇ ಸತಾಯಿಸಿ ಡಿಸೆಂಬರ್, ಜನವರಿಯಲ್ಲಿ ನೀಡುತ್ತಾ ಬಂದಿದೆ. ಜನವರಿ 5ರಂದು ಗುತ್ತಿಗೆದಾರರು ಸಭೆ ಸೇರಿ 2022-23 ರ ಅವಧಿಗೆ 10 ರೂಪಾಯಿ ಹೆಚ್ಚುವರಿ ಕಮಿಷನ್ಗಾಗಿ ಒತ್ತಾಯಿಸಲಾಗಿದೆ. ಜನವರಿ 16ರೊಳಗೆ ಇದನ್ನು ನೀಡಬೇಕೆಂದು ಮನವಿ ಮಾಡಲಾಯಿತು. ಆದರೆ ಯಾವುದೇ ಕ್ರಮ ಆಡಳಿತ ವರ್ಗದ ಕಡೆಯಿಂದ ಆಗಿಲ್ಲ. ಇದೀಗ ಆಡಳಿತ ವರ್ಗಕ್ಕೆ ನಾವು ಫೆಬ್ರವರಿ 10ರ ಗಡುವು ನೀಡುತ್ತೇವೆ. ಅಷ್ಟರೊಳಗೆ ಮಾತುಕತೆಗೆ ಆಹ್ವಾನಿಸದೇ ಇದ್ದಲ್ಲಿ ಅಂದಿನಿಂದ 3 ಜಿಲ್ಲೆಗಳ ಬೀಡಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ, ಬೇಡಿಕೆ ಈಡೇರುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದವರು ಎಚ್ಚರಿಸಿದರು.
ಸುಮಾರು 60 ಡಿಪೋಗಳ ಎದುರು ಧರಣಿ ಸತ್ಯಾಗ್ರಹ, ಬೀಡಿ, ಎಲೆ, ತಂಬಾಕು, ಲೇಬಲ್ ಬೀಡಿ, ಸಾಗಾಟಕ್ಕೆ ತಡೆ ಹಿಡಿದು ಮಂಗಳೂರು ಗಣೇಶ್ ಬೀಡಿ ಕಚೇರಿ ಮತ್ತು ಭಾರತ್ ಬೀಡಿ ಸಮೂಹ ಸಂಸ್ಥೆಯ ಎದುರು ಬೀಡಿ ಗುತ್ತಿಗೆದಾರರು ಮತ್ತು ಬೀಡಿ ಕಾರ್ಮಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ಸಂಘಟನೆಯ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷರಾದ ರವಿ ಉಡುಪಿ, ಹರೀಶ್ ಕೆ. ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ್ ಶೆಟ್ಟಿ, ಕೃಷ್ಣ ಕಾಸರಗೋಡು ಮತ್ತಿತರರು ಉಪಸ್ಥಿತರಿದ್ದರು.