ಮಂಗಳೂರು, ಜ 30 (DaijiworldNews/HR): ರಾಜಕೀಯ ಲಾಭ, ವ್ಯಾಪಾರಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅವಿಶ್ವಾಸ, ದ್ವೇಷ, ಕೊಲೆ, ಅಹಿತಕರ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ಶಾಸಕ ಹಾಗೂ ವಿಧಾನಸಭಾ ಸಭಾ ವಿಪಕ್ಷ ನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಶರಣ್ ಪಂಪ್ ವೆಲ್ ಅವರು ತುಮಕೂರಿನಲ್ಲಿ ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ರೀತಿ ಹೇಳಿಕೆ ನೀಡುವ ಯಾರೇ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಅಗತ್ಯವಿದೆ ಎಂದರು.
ಇನ್ನು ಸುರತ್ಕಲ್ ನ ಫಾಝಿಲ್ ಪ್ರಕರಣದ ಬಗ್ಗೆ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಈ ಪ್ರಕರಣದ ಮರು ತನಿಖೆ ಅಗತ್ಯವಿದ್ದು, ದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ರೀತಿ ರಾಜ್ಯದಲ್ಲಿ ನಡೆದ ಎಲ್ಲಾ ಪ್ರಕರಣಗಳ ಮರು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಜಿ.ಕೆ.ಜಬ್ಬಾರ್, ಝಕರಿಯಾ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.