ಮಂಗಳೂರು, ಜ 30 (DaijiworldNews/HR): ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ನಡೆಸಿದ್ದೇವೆ ಎಂದು ಹಿಂದೂ ಮುಖಂಡ ವಿ ಹೆಚ್ ಪಿ ನಾಯಕ ಶರಣ್ ಪಂಪ್ವೆಲ್ ನೀಡಿರುವ ಹೇಳಿಕೆ ನಾಗರೀಕ ಸಮಾಜಕ್ಕೆ ಆಘಾತಕಾರಿ ವಿಚಾರವಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಒರ್ವ ಹಿಂದೂ ಮುಖಂಡನಾಗಿ ಇಂತಹ ಹೇಳಿಕೆ ನ್ಯಾಯ ವ್ಯವಸ್ಥೆಗೆ ಎಸೆದಿರುವ ಸವಾಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರಂತೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಹೇಳಿಕೆಗೆ ನೇರವಾಗಿ ಬೆಂಬಲಿಸಿದಂತಾಗಿದ್ದು ಅಮಾಯಕರನ್ನು ಕೊಲ್ಲುವುದೇ ಇವರ ಹಿಡನ್ ಅಜೆಂಡಾ ಆಗಿ ಉಳಿದಿದೆ. ಸಾರ್ವಜನಿಕ ಸಭೆಯಲ್ಲಿ ಭಯ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ವಿರುದ್ದ ಪೊಲೀಸ್ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇವರ ಇಂತಹ ಹೇಳಿಕೆಗಳು ನಾಗರಿಕ ಸಮಾಜ ತಲೆ ಬಾಗಿಸುವಂತಹ ಕೆಲಸ ಕೇಂದ್ರ ಸರಕಾರ ಮಾಡಿದೆ ಎಂದರು.
ಶರಣ್ ಅವರ ಹೇಳಿಕೆ ಸಮಾಜದಲ್ಲಿ ಹತ್ಯೆ ಹಾಗೂ ಘರ್ಷಣೆಗೆ ಪ್ರಚೋದನೆ ನೀಡುವಂತಿದ್ದು ಇಂದು ಅಮಾಯಕ ಯುವಕರನ್ನು ಇಂತಹ ಸಮಾಜದ್ರೋಹಿ ಕೆಲಸಗಳಿಗೆ ಬಳಸಿಕೊಂಡು ಚುನಾವಣೆ ಹತ್ತಿರವಿರುವ ಸಮಯದಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಲು ಕಾರಣವಾಗುತ್ತಿದೆ. ಇದಕ್ಕೆ ಅವಕಾಶ ನೀಡದೆ ಇಂತಹ ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.