ಮಂಗಳೂರು, ಜ 28 (DaijiworldNews/DB): ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣದಲ್ಲಿ ವಲಯ ಅರಣ್ಯಾಧಿಕಾರಿಯೊಬ್ಬರಿಗೆ 5 ವರ್ಷಗಳ ಸಾದಾ ಸಜೆ ಮತ್ತು 1.50 ಲ.ರೂ. ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ದೇರೆಬೈಲ್ ಕೊಂಚಾಡಿ ನಿವಾಸಿ, ನಿವೃತ್ತ ವಲಯ ಅರಣ್ಯಾಧಿಕಾರಿ ಎಸ್.ರಾಘವ ಪಾಟಾಳಿ ಶಿಕ್ಷೆಗೊಳಗಾದವರು. ಅವರು ಬೆಳ್ತಂಗಡಿ ಸಹ್ಯಾದ್ರಿ ವಲಯದ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
2011ರ ಜುಲೈ 21ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆ 1988ರಡಿ ಈತನ ವಿರುದ್ದ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿಗೆ ಐದು ವರ್ಷಗಳ ಸಾದಾ ಸಜೆ ಮತ್ತು 1.50 ಕೋ.ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಅಪರಾಧಿಯು ದಂಡ ಪಾವತಿಸಲು ವಿಫಲನಾದಲ್ಲಿ ಮತ್ತು ಒಂದು ವರ್ಷ ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಲಾಗುತ್ತದೆ.
ಪೊಲೀಸ್ ನಿರೀಕ್ಷಕ ಉದಯ ಎಂ. ನಾಯಕ್ ದೂರು ದಾಖಲಿಸಿದ್ದರು. ಪೊಲೀಸ್ ಉಪಾಧೀಕ್ಷಕ ವಿಠಲ್ ದಾಸ್ ಪೈ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದಿಸಿದ್ದರು.