ಬಂಟ್ವಾಳ, ಜ 27 (DaijiworldNews/SM): ಉತ್ತಮ ಯೋಚನೆಗಿಂತ ಕೆಟ್ಟ ಯೋಚನೆಗಳೇ ರಾಜಕೀಯದಲ್ಲಿ ಹೆಚ್ಚು. ಸತ್ಯಕ್ಕಿಂತ ಸುಳ್ಳು ಆಶ್ವಾಸನಗಳೇ ಇರುತ್ತದೆ. ಆದರೆ ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ. ನವ ಬಂಟ್ವಾಳದ ನಿರ್ಮಾಣ ರಾಜೇಶ್ ನಾಯ್ಕ್ ರಿಂದಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಾಗ ಸಾಮರಸ್ಯ ನೆಲೆಯೂರಲು ಸಾಧ್ಯ. 1.0 ಇದ್ದ ಬಂಟ್ವಾಳವನ್ನು 2.0 ಮಾಡಿ ತೋರಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಬಂಟ್ವಾಳದ ಬಸ್ತಿಪಡ್ಪು ಮೈದಾನದಲ್ಲಿ ಶುಕ್ರವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ " ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ" ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.
ಕೃಷಿಕರನ್ನು ಮೇಲೆಕ್ಕೆತ್ತುವ ಕಾರ್ಯ ಕೇಂದ್ರ, ರಾಜ್ಯ ಸರಕಾರದಿಂದ ಆಗುತ್ತಿದೆ. ಪಕ್ಷ, ನಾಯಕರ ಮೇಲೆ ನಂಬಿಕೆ ಅಗತ್ಯವಿದೆ ಎಂದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಬಿಜೆಪಿಯ ಗೆಲುವು ನಿಶ್ಚಿತ. ಆದರೆ ಮತವನ್ನು ಇಮ್ಮಡಿಗೊಳಿಸುವ ಗ್ರಾಮ ವಿಕಾಸ ಯಾತ್ರೆ ಅಗತ್ಯವಿದೆ. ಪಾದಯಾತ್ರೆ ಯ ಮೂಲಕ ಶಾಸಕರು ತಾನು ನಿರ್ವಹಿಸಿದ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಅನ್ನು ಗ್ರಾಮಗ್ರಾಮಗಳಿಗೆ ತಲುಪಿಸಿದ್ದಾರೆ, ಅದು ಮನೆ ಮನಗಳಿಗೆ ತಲುಪಬೇಕಿದೆ ಎಂದರು.
ಕಾಂಗ್ರೆಸ್ ನಿಂದ ಸುಳ್ಳಿನ ಕಂತೆ:
ಮಾತನಾಡುವುದಕ್ಕಿಂತ ಅದನ್ನು ಮಾಡಿತೋರಿಸುವ ತಾಕತ್ತು ನಮ್ಮಲ್ಲಿರಬೇಕು. ಕೆಲಸ ಮಾಡಿ ಹೇಳುವ ಪದ್ದತಿ ಬಿಜೆಪಿಯದ್ದಾಗಿದೆ ಎಂದ ಅಣ್ಣಾಮಲೈ ಕಾಂಗ್ರೆಸ್ ನಿಂದ ಸುಳ್ಳಿನ ಕಂತೆಯನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.
ಎರಡು ಸಾವಿರ ರೂಪಾಯಿ ಯಾವುದೇ ಕಾರಣಕ್ಕೂ ಜನರಿಗೆ ಕೊಡಲು ಸಾಧ್ಯವಿಲ್ಲ. ಯುವಜನತೆ ಎಚ್ಚೆತ್ತುಕೊಂಡು ಕೆಲಸಮಾಡಬೇಕಿದೆ ಎಂದರು.
ನಾವು ಒಟ್ಟು ಸೇರಿ ಅಭಿವೃದ್ಧಿಯ ಕಡೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದೀಜಿಯವರ ನಿರಂತರ ಪ್ರಯತ್ನದ ಫಲವಾಗಿ ನಾವಿಂದು ಕೊರೋನದಿಂದ ಮುಕ್ತರಾಗಿದ್ದೇವೆ.
ರಾಜಕೀಯ ಶಿಕ್ಷಣ ಎಲ್ಲರಿಗೂ ಬೇಕಾಗಿದೆ.
ಪಾರ್ಟಿ ಇನ್ನಷ್ಟು ಆಳವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಕಾಂಗ್ರೆಸ್ ಗೆ ಕರ್ನಾಟಕದ ಮೇಲೆ ಕಣ್ಣಿದ್ದು, ಕಾಂಗ್ರೆಸ್ ಕಲ್ಪನೆ ವಿಚಿತ್ರವಾಗಿದ್ದು, ಕಾಂಗ್ರೆಸ್ ಬಗ್ಗೆ ನಮಗೆ ಭಯಬೇಡ, ಇಲ್ಲಿನ ಜನರಿಗೆ ವಿಕಾಸ ಬೇಕು. ಬ್ರಿಟಿಷ್ ಆಳ್ವಿಕೆಯ ತರಹದ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅಣ್ಣಾಮಲೈರವರು ಹೇಳಿದರು.
ನಕಲಿ ಹಿಂದುಗಳು ಬರುತ್ತಿದ್ದಾರೆ : ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿರವರು ಮಾತನಾಡಿ,ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ ಕೇಳುವುದಕ್ಕಾಗಿ ಆಗಿರಲಿಲ್ಲ.ಬದಲಾಗಿ ಈ ಯಾತ್ರೆ ಬಿಜೆಪಿಗರನ್ನು ಹಾಗೂ ಪ್ರಧಾನಿ ಮೋದಿ ಬೈಯ್ಯುವ ಯಾತ್ರೆಯಾಗಿತ್ತು ಎಂದರು.
ಕರಾವಳಿಗರ ನೆಮ್ಮದಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದ್ದು, ನೈಜ ಹಿಂದೂಗಳು ದೈವ ವಿರೋಧಿಗಳು, ಕುಂಕುಮ ಅಳಿಸೋರಾ ಎಂದು ಪ್ರಶ್ನಿಸಿದ ಅವರು,
ನಕಲಿ ಹಿಂದೂಗಳಿಗೆ ಕೇಸರಿ ಕಂಡರೆ ಆಗಲ್ಲ. ನೈಜ ಹಿಂದುಗಳು ದೈವದೇವರನ್ನು ನಿಂದಿಸಲ್ಲ. ರಾಮಮಂದಿರಕ್ಕೆ ವಿರೋಧ ಮಾಡಿದವರು ನಕಲಿ ಹಿಂದುಗಳು, ಮೊನ್ನೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿದ್ದವರು ನಕಲಿ ಹಿಂದುಗಳು ಎಂದರು.