ಬಂಟ್ವಾಳ, ಜ 27 (DaijiworldNews/SM): ಚೀನಾ-ಪಾಕಿಸ್ಥಾನ ಮಾನಸಿಕತೆಯವರು ಬಿಬಿಸಿ ಯ ಮೂಲಕ ಟೂಲ್ ಕಿಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಅವರು, ಬಂಟ್ವಾಳದಲ್ಲಿ ಬಿಬಿಸಿ ವಿವಾದ ಕುರಿತಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಸುಪ್ರೀಂಕೋರ್ಟ್ ತನಿಖಾ ಸಂಸ್ಥೆಯ ಮೂಲಕ ಗೋಧ್ರಾ ಘಟನೆಯ ಕುರಿತು ತನಿಖೆ ನಡೆಸಿ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ, ಆದರೆ ದೇಶದ ನ್ಯಾಯಾಂಗ ವ್ಯವಸ್ಥೆಯ ಕುರಿತು ಭರವಸೆ ಇಲ್ಲದವರು ಬಿಬಿಸಿ ಯ ಮೂಲಕ ದೇಶದ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಎನ್ ಐ ಎ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ದೇಶದ್ರೋಹಿ ಸಂಘಟನೆಯಾದ ಪಿಎಫ್ ಐನ ಕರಾಳಮುಖಗಳು ಇದರ ಮೂಲಕ ಬಹಿರಂಗ ಗೊಂಡಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಮಾಡಲಿದೆ ಎಂದು ಮಸೀದಿ, ಮದ್ರಸಗಳಲ್ಲಿ ಕೂತು ಪಿಎಫ್ ಐ ಆರೆಸ್ಸೆಸ್ ಪ್ರಮುಖರ ಹತ್ಯೆಗೆ ಸಂಚು ರೂಪಿಸಿರುವುದು ಚಾರ್ಜ್ ಶೀಟ್ ನಲ್ಲಿದ್ದು, ಬೆಂಗಳೂರಿನ ರುದ್ರೇಶ್ ಮೈಸೂರಿನ ರಾಜು, ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಪಿಎಫ್ ಐ ಇರುವುದು ಧೃಡವಾಗಿದ್ದು, ಕೇರಳ ಹಾಗೂ ಕರಾವಳಿ ಜಿಲ್ಲೆಯಲ್ಲಿ ಈ ಸಂಘಟನೆ ಸಕ್ರಿಯವಾಗಿರುವ ಕೆಲಸಮಾಡುತ್ತಿದೆ.
ಇದರ ಹಿಂದೆ ಇರುವವರನ್ನು ಬಯಲಿಗೆ ಎಳೆಯದೇ ಇದ್ದರೆ, ಕಾನೂನುಸುವ್ಯವಸ್ಥೆ ಕಾಪಾಡುವುದು ಕಷ್ಟ ಸಾಧ್ಯ. ಹೀಗಾಗಿ ಸರ್ಕಾರ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದರು.